ನವದೆಹಲಿ: ಕೊರೋನಾ ಜನಕ ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರಸ್ ಶುರುವಾಗಿದ್ದು, ಇತ್ತ ಕೇಂದ್ರ ಆರೋಗ್ಯ ಇಲಾಖೆಯು ಭಾರತದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಚೀನಾದಲ್ಲಿ ಶಾಲೆಗೆ ತೆರಳುತ್ತಿರುವ ಮಕ್ಕಳಿಗೆ ಹೊಸ ವೈರಸ್ (ಎಚ್9ಎನ್2) ಕಂಟಕವಾಗ್ತಿದೆ. ನ್ಯೂಮೋನಿಯಾ ಮಾದರಿಯ ಲಕ್ಷಣಗಳಿಂದ ದೊಡ್ಡ ಮಟ್ಟದಲ್ಲಿ ಮಕ್ಕಳು ಅನಾರೋಗ್ಯಕ್ಕೆ ಗುರಿ ಆಗ್ತಿದ್ದಾರೆ. ನೇರ ಶ್ವಾಸಕೋಶಕ್ಕೆ ವೈರಸ್ ಅಟ್ಯಾಕ್ ಆಗುತ್ತದೆ. ಇದರಿಂದ ಮಕ್ಕಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಚೀನಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೀನಾ ಆಸ್ಪತ್ರೆಗಳಲ್ಲಿ ಸೋಂಕಿತರೇ ತುಂಬಿದ್ದಾರೆ.
ಆತಂಕ ಬೇಡ: ಕೇಂದ್ರ ಸರ್ಕಾರ
ಉತ್ತರ ಚೀನಾದಲ್ಲಿ ಕಾಣಿಸಿಕೊಂಡಿರುವ ‘ಎಚ್9ಎನ್2’ ಸೋಂಕು ಪ್ರಕರಣಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.
”ಚೀನಾದ ಬೀಜಿಂಗ್ ಹಾಗೂ ಲಿಯಾನಿಂಗ್ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿರುವ ಎಚ್9ಎನ್2 ಪ್ರಕರಣಗಳು ಹಾಗೂ ಮಕ್ಕಳಲ್ಲಿ ಕಂಡುಬಂದಿರುವ ಉಸಿರಾಟ ಸಮಸ್ಯೆಯ ಕಾಯಿಲೆಗಳಿಂದ ಭಾರತಕ್ಕೆ ತೀವ್ರತರದ ಅಪಾಯವೇನೂ ಇಲ್ಲ. ಆದಾಗ್ಯೂ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಿಸಲು ದೇಶ ಸನ್ನದ್ಧವಾಗಿದೆ,” ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ
ಕೋವಿಡ್ ಸಾಂಕ್ರಾಮಿಕದ ನಂತರ ದೇಶದಲ್ಲಿ ಆರೋಗ್ಯ ಮೂಲಸೌಕರ್ಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಭಾರತವು ಯಾವುದೇ ರೀತಿಯ ಸಾರ್ವಜನಿಕ ಆರೋಗ್ಯದ ಅಗತ್ಯತೆಗಳಿಗೆ ಸಿದ್ಧವಾಗಿದೆ. ತುರ್ತು ಸಂದರ್ಭದಲ್ಲಿ ಸಮಗ್ರ ಆರೋಗ್ಯ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಲು ಸದಾ ಸನ್ನದ್ಧ ಸ್ಥಿತಿಯಲ್ಲಿರುತ್ತದೆ,” ಎಂದು ಸಚಿವಾಲಯ ಹೇಳಿಕೆಯಲ್ಲಿತಿಳಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಎಚ್9ಎನ್2 ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ದೇಶದಲ್ಲಿಇಂಥ ಪ್ರಕರಣಗಳನ್ನು ಎದುರಿಸಲು ಅಗತ್ಯ ಸನ್ನದ್ಧತೆ ಕ್ರಮಗಳ ಕುರಿತು ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ (ಡಿಜಿಎಚ್‌ಎಸ್) ಸಭೆ ನಡೆಸಿದೆ ಎಂದೂ ಸಚಿವಾಲಯ ತಿಳಿಸಿದೆ.
ಚೀನಾದ ಮಕ್ಕಳಲ್ಲಿ ಉಸಿರಾಟ ಸಮಸ್ಯೆಗಳು ಹೆಚ್ಚುತ್ತಿರುವುದು ಹಾಗೂ ಎಚ್9ಎನ್2 ಪ್ರಕರಣಗಳ ಏರಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ದತ್ತಾಂಶಗಳ ಮಾಹಿತಿ ನೀಡುವಂತೆ ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ ಮತ್ತು ಬೀಜಿಂಗ್ ಚಿಲ್ಡ್ರನ್ಸ್ ಹಾಸ್ಪಿಟಲ್‌ಗೆ ಸೂಚಿಸಿದೆ.