ಸೂರ್ಯಕುಮಾರ್ ಯಾದವ್ ಸಾರಥ್ಯದ ಟೀಮ್ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ಎದುರು ಬ್ಯಾಕ್ ಟು ಬ್ಯಾಕ್ ಜಯ ದಾಖಲಿಸಿ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಗಳಿಸಿದೆ. ಇದೀಗ ಇಲ್ಲಿನ ಬರ್ಸಾಪರ ಕ್ರೀಡಾಂಗಣದಲ್ಲಿ ಮಂಗಳವಾರ (ನ.28) ನಡೆಯಲಿರುವ ಮೂರನೇ ಪಂದ್ಯದಲ್ಲೂ ಪ್ರವಾಸಿಗರ ಸದ್ದಡಗಿಸಿ ಸರಣಿ ಗೆಲುವು ಖಾತ್ರಿ ಪಡಿಸಿಕೊಳ್ಳುವ ಲೆಕ್ಕಾಚಾರ ಮಾಡಿದೆ.
ಅತ್ತ ವಿಶ್ವ ಚಾಂಪಿಯನ್ ಕಾಂಗರೂ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆದ್ದರಷ್ಟೇ ಉಳಿಗಾಲ. ಹೀಗಾಗಿ ಇಂದು ಮೂರನೇ ಟಿ20 ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಭಾರತ ಟಿ20 ತಂಡದಲ್ಲಿ ಆಡುತ್ತಿರುವ ಎಲ್ಲ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿ ಇದ್ದಾರೆ. ಸರಣಿಯ ಮೂರನೇ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಭಾರತ ತಂಡ ಸೇರಲಿದ್ದಾರೆ. ಉಪನಾಯಕನ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್‌ಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಗಲಿದೆ.
ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಬಯಸಿದರೆ, ಕಳೆದ ಎರಡೂ ಪಂದ್ಯಗಳಲ್ಲಿ ದುಬಾರಿಯಾದ ಪ್ರಸಿದ್ಧ್ ಕೃಷ್ಣ ಜಾಗಕ್ಕೆ ಆವೇಶ್ ಖಾನ್ ಅಥವಾ ಶಿವಂ ದುಬೆ ಅವರನ್ನು ಕರೆತಂದರೆ ಅಚ್ಚರಿ ಪಡಬೇಕಿಲ್ಲ.
ಬರ್ಸಾಪುರ ಪಿಚ್ ಹೇಗಿದೆ?
ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ನಿಧಾನವಾಗಿದೆ. ಆದಾಗ್ಯೂ ಇತ್ತೀಚಿನ ದಾಖಲೆ ಗಮನಿಸಿದರೆ ಇದು ಬ್ಯಾಟಿಂಗ್‌ಗೆ ಅನುಕೂಲಕರ ಎಂದು ಹೇಳಬಹುದು. ಬೌಲರ್‌ಗಳಿಗೆ ಹೆಚ್ಚಿನ ಸಹಾಯ ಮಾಡುವುದಿಲ್ಲ. ಈ ಸ್ಥಳದಲ್ಲಿ ಆಯೋಜಿಸಲಾದ ಮೂರು T20I ಗಳಲ್ಲಿ, ಸರಾಸರಿ ಸ್ಕೋರ್ 118 ಆಗಿದೆ. ಮೊದಲು ಬ್ಯಾಟಿಂಗ್ ಮಾಡುವ ಮತ್ತು ಚೇಸಿಂಗ್ ಮಾಡುವ ತಂಡಗಳ ಗೆಲುವು-ಸೋಲಿನ ದಾಖಲೆಯು 1-1 ರಲ್ಲಿ ಸಮಬಲವಿದೆ. ಆಟ ಶುರುವಾದ ನಂತರ ಇಬ್ಬನಿಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆ. ಪಂದ್ಯಕ್ಕೆ ಯಾವುದೇ ಮಳೆಯ ನಿರೀಕ್ಷೆಯಿಲ್ಲ.
ಪಂದ್ಯ ಆರಂಭ: ಸಂಜೆ 7 ಗಂಟೆ
ಸ್ಥಳ: ಗುವಾಹಟಿ
ನೇರಪ್ರಸಾರ: ಜೀಯೋ ಸಿನಿಮಾ, ಸ್ಪೋರ್ಟ್ಸ್ 18