ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರ ಒಂದಿಲ್ಲೊಂದು ವಿವಾದಗಳ ಮೂಲಕ ಈಗೀಗ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಭಾನುಮತಿ ಆನೆಯ ಬಾಲ ತುಂಡಾದ ಬಗ್ಗೆ ಸಕತ್ ಸುದ್ದಿಯಾಗಿತ್ತು. ಇದೀಗ ಸಕ್ರೆಬೈಲ್ ಬಿಡಾರದಲ್ಲಿ ಅವಘಡವೊಂದು ಸಂಭವಿಸಿದೆ. ನವಜೋಡಿಗಳ ಪ್ರಿ ವೆಡ್ಡಿಂಗ್ ಶೂಟಿಂಗ್ ವೇಳೆ ದುರ್ಘಟನೆ ನಡೆದಿದೆ.
ಕುಂತಿ ಆನೆ ಮುಂಬಂದಿಯಲ್ಲಿ ನವ ಜೋಡಿಗಳು ಹೋಗುವ ದೃಶ್ಯ ಸೆರೆ ಹಿಡಿಯುವ ವೇಳೆ ದ್ರುವ ಆನೆ ಮರಿ ಏಕಾಏಕಿ ತಾಯಿ ಕುಂತಿ ಬಳಿ ಬಂದಿದೆ. ಆಗ ತಕ್ಷಣ ಕುಂತಿ ತಿರುಗಿದಾಗ ಆಯತಪ್ಪಿ ಮಾವುತ ಸಂಶುದ್ದಿನ್ ಕೆಳಗೆ ಬಿದ್ದಿದ್ದಾರೆ. ಸಂಶುದ್ದೀನ್ ಕೈಗೆ ಹಾಗು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆಗ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಪೂರ್ಣ ಘಟನಾವಳಿಯನ್ನು ಬಿಡಾರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರೂ ಚಿತ್ರೀಕರಿಸಿದ್ದಾರೆ. ಅಲ್ಲದೇ, ಸೋಷಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದು, ವೈರಲ್ ಆಗುತ್ತಿದೆ.
ಮಾವುತ ಸಂಶುದ್ದೀನ್ ಗೆ ಸಹಸಿಬ್ಬಂದಿಯಂತಿರುವ ಕಾವಾಡಿ ಇಲ್ಲ. ಕುಂತಿ ತಾಯಿ ಆನೆಗೆ ಒಂಬತ್ತು ತಿಂಗಳ ಮರಿಯಾನೆ ದೃವ ಜೊತೆಗಿದೆ. ತಾಯಿ ಹಾಗು ಮರಿಯನ್ನು ಒಬ್ಬನೇ ಸಿಬ್ಬಂದಿ ನೋಡಿಕೊಳ್ಳುವುದು ಹಾಗೂ ಆನೆ ನಿಯಂತ್ರಿಸುವುದು ಕಷ್ಟಕರ ಕೆಲಸವೇ ಆಗಿದೆ. ಆನೆಯ ಮೇಲೆ ಒಬ್ಬರಿದ್ದರೆ. ಕೆಳಗೆ ಮತ್ತೊಬ್ಬ ಸಿಬ್ಬಂದಿಯಿರಬೇಕು. ಇದರ ಜೊತೆ ತಾಯಿ ಹಾಗೂ ಮರಿಗೆ ಒಬ್ಬನೇ ಮಾವುತ ಇದ್ರೆ ಪರಿಸ್ಥಿತಿ ಹೇಗಾಗಬೇಡ. ತಾಯಿ ಆನೆ ಮೇಲೆ ಮಾವುತ ಸಂಶುದ್ದೀನ್ ಇದ್ದ ಸಂದರ್ಭದಲ್ಲಿಯೇ ಮರಿಯಾನೆ ದೃವ ಚಂಗನೇ ತಾಯಿ ಬಳಿ ಓಡೋಡಿ ಬರುವಾಗ ಎಡವಟ್ಟು ನಡೆದಿದೆ.