ಲಕ್ನೋ : ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಕಟ್ಟಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಸಿದ್ಧರಾಗಿದ್ದಾರೆ. ಇದೀಗ ಅದೇ ರೀತಿ ಅವರ ಬುಲ್ಡೋಜರ್ ನ್ಯೂಯಾರ್ಕ್ ಸಿಟಿಯಲ್ಲೂ ಆರ್ಭಟಿಸಿದೆ. ಬುಲ್ಡೋಜರ್ ಬಳಸಿ ಕಾನೂನು ಬಾಹಿರವಾಗಿ ನಿರ್ಮಿಸುತ್ತಿದ್ದ ಬಡಾವಣೆಯನ್ನು ನೆಲಸಮಗೊಳಿಸಿದೆ.
ಅಂದ್ಹಾಗೆ ಇದು ಅಮೆರಿಕಾದ ನ್ಯೂಯಾರ್ಕ್ ನಗರ ಅಲ್ಲ. ಉತ್ತರಪ್ರದೇಶದ ಹೊರವಲಯದಲ್ಲಿರುವ ಕಾಕೋರಿಯಾ ಮೌಡಾ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸುತ್ತಿದ್ದ `ನ್ಯೂಯಾರ್ಕ್ ಸಿಟಿ’ಯನ್ನು ಲಕ್ನೋ ಅಭಿವೃದ್ಧಿ ಪ್ರಾಧಿಕಾರ (LDA) ಧ್ವಂಸಗೊಳಿಸಿದೆ.
ಈ ಬಗ್ಗೆ ಎಲ್‌ಡಿಎ ವಲಯ ಅಧಿಕಾರಿ ದೇವಾಂಶ್ ತ್ರಿವೇದಿ ಮಾತನಾಡಿ, ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಟೌನ್‌ಶಿಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಲ್‌ಡಿಎ ಡೆವಲಪರ್‌ಗಳಿಗೆ ಈ ಹಿಂದೆ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದರೂ ಮತ್ತೆ ನಿರ್ಮಾಣವನ್ನು ಪ್ರಾರಂಭಿಸಿದ್ದಾರೆ ಎಂದರು.
ಬಳಿಕ ಎಲ್‌ಡಿಎ ನ್ಯಾಯಾಲಯವು ಇದನ್ನು ಕೆಡವಲು ಆದೇಶ ಹೊರಡಿಸಿತು. ಆದ್ದರಿಂದ ಗುರುವಾರ ಸಹಾಯಕ ಎಂಜಿನಿಯರ್ ವೈಪಿ ಸಿಂಗ್ ನೇತೃತ್ವದ ಎಲ್‌ಡಿಎ ತಂಡ ಮತ್ತು ಪೊಲೀಸರ ಬೆಂಗಾವಲಿನೊಂದಿಗೆ ಬಡಾವಣೆಯನ್ನು ಧ್ವಂಸಗೊಳಿಸಲಾಯಿತು ಎಂದು ಅವರು ತಿಳಿಸಿದ್ದಾರೆ.