ಟೆಲ್ ಅವೀವ್: ಕೇವಲ ಗಾಜಾ ಪಟ್ಟಿ ಮಾತ್ರವಲ್ಲದೇ, ವಿಶ್ವದೆಲ್ಲೆಡೆ ಇರುವ ಹಮಾಸ್ ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್ ನಿರ್ಧರಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲಿನ ವಿದೇಶಿ ಗುಪ್ತಚರ ಸೇವೆ ನೀಡುವ ಮೊಸಾದ್‌ಗೆ ಆದೇಶ ನೀಡಿರುವ ಬಗ್ಗೆ ವರದಿಯಾಗಿದೆ. ವಿಶ್ವದೆಲ್ಲೆಡೆ ಇರುವ ಹಮಾಸ್ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುವಂತೆ ಅವರು ಆದೇಶ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಟರ್ಕಿ, ಲೆಬನಾನ್ ಮತ್ತು ಕತಾರ್‌ನಲ್ಲಿ ನೆಲೆಸಿರುವ ಹಮಾಸ್ ನಾಯಕರನ್ನು ಪತ್ತೆ ಹಚ್ಚುವ ಕೆಲಸವನ್ನು ಗುಪ್ತಚರ ಇಲಾಖೆ ಪ್ರಾರಂಭಿಸಿದೆ. ಕತಾರ್ ತನ್ನ ರಾಜಧಾನಿ ದೋಹಾದಲ್ಲಿ ಕಳೆದ ಒಂದು ದಶಕದಿಂದ ರಾಜಕೀಯ ಕಚೇರಿಯನ್ನು ನಡೆಸಲು ಹಮಾಸ್‌ಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ.
ಸಾಮಾನ್ಯವಾಗಿ ಈ ರೀತಿಯ ಯೋಜನೆಗಳು ರಹಸ್ಯವಾಗಿರುತ್ತದೆ. ಆದರೆ ನೆತನ್ಯಾಹು ನ.22 ರಂದು ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಹಮಾಸ್ ನಾಯಕರ ವಿರುದ್ಧ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು.