‘ಬಿಗ್ ಬಾಸ್’ ಕನ್ನಡ ಶೋ 10ನೇ ಸೀಸನ್ ನಡೆಯುತ್ತಿದೆ. ಕಿಚ್ಚ ಸುದೀಪ್ ನಿರೂಪಕರಾಗಿ 10 ನೇ ಸೀಸನ್ ವರೆಗೂ ಹೆಜ್ಜೆ ಹಾಕಿದ್ದಾರೆ. ಈ ಬಾರಿ ಅವರು ಎಂದೂ ತೆಗೆದುಕೊಳ್ಳದ ನಿರ್ಧಾರವನ್ನು ಮಾಡಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಶೋನಲ್ಲಿ ಅವರಾಗಿಯೇ ಒಂದು ನಿರ್ಧಾರ ಮಾಡಿದ್ದಾರೆ. ಅದುವೇ ಎಲಿಮಿನೇಷನ್ ಮಾಡದೇ ಇರುವುದು.
ಈ ವಾರ ‘ಬಿಗ್ ಬಾಸ್’ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆಯನ್ನು ಸುದೀಪ್ ಕೈಗೆತ್ತಿಕೊಂಡಿಲ್ಲ. ಹೀಗಾಗಿ ಸ್ಪರ್ಧಿಗಳಲ್ಲಿ ನಾಮಿನೇಟ್ ಆಗಿದ್ದ ಕೆಲವರು ನಿರಾಳರಾಗಿ, ಇನ್ನೊಂದು ವಾರ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಶನಿವಾರದ ಸಂಚಿಕೆಯಲ್ಲಿ ನಾಮಿನೇಟ್ ಆದ 8 ಮಂದಿಯಲ್ಲಿ ವರ್ತೂರು ಸಂತೋಷ್, ನಮ್ರತಾ ಮತ್ತು ಡ್ರೋನ್ ಪ್ರತಾಪ್ ಸೇಫ್ ಆಗಿದ್ದರು.
ಭಾನುವಾರದ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್‌ನಲ್ಲಿ ವಿನಯ್ ಗೌಡ, ಸಂಗೀತಾ ಶೃಂಗೇರಿ, ತನಿಷಾ ಸೇಫ್ ಆದರು. ಅಂತಿಮವಾಗಿ ಉಳಿದಿದ್ದು ಸ್ನೇಹಿತ್ ಮತ್ತು ಮೈಕಲ್. ಮನೆಯ ಕೆಲ ಸದಸ್ಯರಿಗೆ ಸ್ನೇಹಿತ್ ಎಲಿಮಿನೇಟ್ ಆಗಬೇಕು ಎಂಬ ಅಭಿಲಾಷೆ ಇತ್ತು. ಆದರೆ ಸುದೀಪ್ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರಿಗೂ ಶಾಕ್ ಕೊಟ್ಟಿತು. ಹೀಗಾಗಿ ಎಲಿಮಿನೇಷನ್ ನಡೆಯಲಿಲ್ಲ.
ಸೇಫ್ ಆದ ಮೈಕಲ್, ಸ್ನೇಹಿತ್ :
ಈ ವಾರ ಮನೆಯೊಳಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದಿದ್ದಾರೆ. ಮೊದಲ ವಾರ ಎಂಬ ಕಾರಣಕ್ಕೆ ಅವರು ನಾಮಿನೇಟ್ ಆಗಿರಲಿಲ್ಲ. ಹಾಗಾಗಿ, ಅವರಿಬ್ಬರು ಈ ವಾರ ಸೇಫ್. ಆದರೆ 50ಕ್ಕೂ ಹೆಚ್ಚು ದಿನ ಆಟ ಆಡಿಕೊಂಡು ಬಂದ ಸ್ನೇಹಿತ್ ಮತ್ತು ಮೈಕಲ್ ಅವರಲ್ಲಿ ಒಬ್ಬರು ಇದೇ ವಾರ ಮನೆಯಿಂದ ಆಚೆ ಹೋಗಬೇಕು ಎಂಬುದು ಸುದೀಪ್‌ಗೆ ಅಷ್ಟು ಸರಿ ಎನಿಸಲಿಲ್ಲ. ಅದಕ್ಕಾಗಿ ತಮ್ಮ ಬಳಿ ಇದ್ದ ವಿಶೇಷ ಅಧಿಕಾರವನ್ನು 10 ಸೀಸನ್‌ಗಳಲ್ಲಿ ಇದೇ ಮೊದಲ ಬಾರಿಗೆ ಬಳಸಿದರು. ಈ ವಾರ ಯಾವುದೇ ಎಲಿಮಿನೇಷನ್ ಮಾಡಲಿಲ್ಲ. ಬದಲಿಗೆ, ಸ್ನೇಹಿತ್ ಮತ್ತು ಮೈಕಲ್ ಅವರನ್ನು ಮುಂದಿನ ವಾರಕ್ಕೂ ನೇರವಾಗಿ ನಾಮಿನೇಟ್ ಮಾಡಿದರು.
ವಿಶೇಷ ಅಧಿಕಾರ ಉಪಯೋಗಿಸಿದ ಕಿಚ್ಚ :
ನಮಗೆ ಇರುವ ಒಂದು ಅಧಿಕಾರವನ್ನು ಉಪಯೋಗಿಸಿ, ಫಸ್ಟ್ ಟೈಮ್ ನಾನು ನಿಮ್ಮಿಬ್ಬರನ್ನು ಮನೆಯಿಂದ ಆಚೆ ಕಳಿಸಲ್ಲ. ಈ ಥರ ಒಂದು ಪವರ್‌ನ ಉಪಯೋಗಿಸೋಕೆ ನನಗೆ ಅದು ನೈತಿಕವಾಗಿ ಸರಿ ಎನ್ನಿಸ್ತಾ ಇರಲಿಲ್ಲ. ಆದರೆ ಇವತ್ತು ನಾನು ಅದನ್ನು ಬಳಸಿದ್ದೇನೆ. ನಿಮ್ಮಿಬ್ಬರಲ್ಲಿ ಒಬ್ಬರು ಮನೆಗೆ ಹೋಗಬೇಕಿತ್ತು. ಆದರೆ ಅವರು ಯಾರು ಅಂತ ನಾನು ಹೇಳಲ್ಲ. ನಿಮ್ಮ ಜಾಗದಲ್ಲಿ ಯಾರೇ ಇದ್ದರೂ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಇದು ಈ ಕ್ಷಣಕ್ಕೆ ತೆಗೆದುಕೊಂಡ ನಿರ್ಧಾರ ಎಂದು ‘ಕಿಚ್ಚ’ ಸುದೀಪ್ ಹೇಳಿದರು.