ಕುಂದಾಪುರ : ಕೇಂದ್ರ ಸರ್ಕಾರ ನೀಡುವ ಬಿಲಿಯನೇರ್ ರೈತ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಕೆದೂರು ಗ್ರಾಮದ ಉದ್ಯಮಿ ರಮೇಶ್ ನಾಯಕ್ ಆಯ್ಕೆಯಾಗಿದ್ದಾರೆ.
ರೈಸ್‌ಮಿಲ್ ಉದ್ಯಮದ ಜೊತೆಗೆ ಪ್ರಗತಿಪರ ರೈತ ರಮೇಶ್ ನಾಯಕ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡಿಸೆಂಬರ್ 7 ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ರಮೇಶ್ ನಾಯಕ್ ಅವರು ತೋಟಗಾರಿಕಾ ಕೃಷಿ ಜೊತೆಗೆ ಹೈನುಗಾರಿಕೆ ಸಹ ನಡೆಸುತ್ತಿದ್ದಾರೆ. ಇನ್ನು ತಮ್ಮ ಜಾಗದಲ್ಲಿ ತೆಗೆದ ಇಂಗು ಗುಂಡಿಯ ಮಣ್ಣನ್ನು ಬಳಿಸಿ 30 ಸಾವಿರಕ್ಕೂ ಅಧಿಕ ಅನಾನಸ್ ಗಿಡಗಳನ್ನು ಬೆಳೆಯುತ್ತಿದ್ದಾರೆ. ಜೊತೆಗೆ ಸಾವಿರಾರು ಪಪ್ಪಾಯಿ ಗಿಡಗಳನ್ನು ಸಹ ಬೆಳೆದಿದ್ದಾರೆ.ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ ಸೂಪರ್ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರಾಗನ್ ಫೂಟ್ ಸೇರಿದಂತೆ ಒಟ್ಟು 1,634 ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ತೋಟದಲ್ಲಿವೆ.