ಹಾಸನ : ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿರುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಬಲ ಕಳೆದುಕೊಂಡು ಕಾಡಾನೆಯೊಂದಿಗೆ ಕಾದಾಡಲಾಗದೆ ಸಾವನ್ನಪ್ಪಿದ್ದಾನೆ ಎಂಬ ವಿಚಾರವೊಂದು ಸದ್ದು ಮಾಡುತ್ತಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆಗಿರುವ ಯಡವಟ್ಟಿನ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಆಕ್ರಮಣಕಾರಿಯಾಗಿದ್ದ ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಒಂಟಿಸಲಗ ಏಕಾಏಕಿ ದಾಳಿ ಮಾಡಿತ್ತು. ಸಲಗ ದಾಳಿ ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಅದು ಗುರಿ ತಪ್ಪಿ ಅರ್ಜುನನ ಕಾಲಿಗೆ ತಗುಲಿರುವ ಬಗ್ಗೆ ಅನುಮಾನ ಮೂಡಿದೆ. ಗುಂಡು ತಗುಲಿದ ಬಗ್ಗೆ ಕಾರ್ಯಾಚರಣೆ ಸ್ಥಳದಲ್ಲಿದ್ದ ಆನೆ ಮಾವುತರೊಬ್ಬರು ನೀಡಿರುವ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟಿಸಿದೆ.
ಅರ್ಜುನನ ಕಾಲಿಗೆ ಗುಂಡು ತಗುಲುತ್ತಲೇ ಅದು ಬಲ ಕಳೆದುಕೊಂಡಿತ್ತು. ಈ ವೇಳೆ ಹಂತಕ ಆನೆ ಹಠಾತ್ ದಾಳಿ ಮಾಡಿತ್ತು ಎನ್ನಲಾಗಿದೆ.
ಕಾರ್ಯಾಚರಣೆ ತಂಡದಿಂದ ಆಕಸ್ಮಿಕವಾಗಿ ಮತ್ತೊಂದು ಯಡವಟ್ಟಾಗಿರುವ ಬಗ್ಗೆ ಅನುಮಾನ ಮೂಡಿದೆ. ಮಿಸ್ ಫೈರ್ ಆಗಿ ಸಾಕಾನೆಗೆ ಅರವಳಿಕೆ ಮದ್ದು ಡಾಟ್ ಆಗಿದ್ದರಿಂದ ಕಾರ್ಯಾಚರಣೆ ತಂಡ ಕೂಡ ಬಲ ಕಳೆದುಕೊಂಡು ಸಮಸ್ಯೆ ಎದುರಿಸಿದೆ. ಮದವೇರಿದ ಆನೆಗೆ ಅರವಳಿಕೆ ಚುಚ್ಚದೇ ಹೋಗಿದ್ದರಿಂದ ಅರ್ಜುನ ಬಲ ಕಳೆದುಕೊಂಡು ಬಲಿಯಾದ ಎನ್ನಲಾಗಿದೆ.
ಈ ಎಲ್ಲಾ ಸಂಶಯಗಳನ್ನು ಬಗೆಹರಿಸಲು ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆಗೆ ಎಲ್ಲೆಡೆ ಒತ್ತಾಯಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ಆದ ಯಡವಟ್ಟಿನ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಲಾಗುತ್ತಿದೆ.
ಕಾರ್ಯಾಚರಣೆ ವೇಳೆ ಯಡವಟ್ಟು :
ಕಾರ್ಯಾಚರಣೆ ವೇಳೆ ಅರವಳಿಕೆ ಇಂಜೆಕ್ಷನ್ ನೀಡಲಾಯಿತು. ಅದು ಗುರಿ ತಪ್ಪಿ ಪ್ರಶಾಂತ ಹೆಸರಿನ ಸಾಕಾನೆಗೆ ಬಿತ್ತು. ನಂತರ ಇನ್ನೊಂದು ಇಂಜೆಕ್ಷನ್ ನೀಡಿ ಪ್ರಶಾಂತನನ್ನು ಸುಧಾರಿಸಲಾಯಿತು. ಆಮೇಲೆ ಅರ್ಜುನನ ಮೇಲೆ ಮೊದಲ ಬಾರಿಗೆ ಕಾಡಾನೆ ದಾಳಿ ಮಾಡಿತು. ಕಾಡಾನೆ, ಸಾಕಾನೆ ಕಾಳಗದ ವೇಳೆ ಕೋವಿಯಿಂದ ಗುಂಡು ಹಾರಿಸಲಾಯಿತು. ಆಗ ಅರ್ಜುನನ ಕಾಲಿಗೆ ಗುಂಡು ತಗುಲಿತ್ತು. ದೊಡ್ಡ ಆನೆ ಅದು ಮರಗಳನ್ನು ಬೀಳಿಸಿತು. ನಾವು ಆನೆ ಮೇಲಿಂದ ಇಳಿದು ಓಡಿದೆವು. ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿರುವ ಬಗ್ಗೆ ವರದಿಯಾಗಿದೆ.