ಬೆಳಗಾವಿ: ತಾಲ್ಲೂಕಿನ ಹೊಸ ಒಂಟಮೂರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಿ, ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.
ಸಂತ್ರಸ್ತೆಯ ಪುತ್ರ ಹಾಗೂ ಇದೇ ಊರಿನ ಯುವತಿ ಪ್ರೀತಿಸುತ್ತಿದ್ದರು. ಯುವತಿ ಮನೆಯವರು ಇದಕ್ಕೆ ಒಪ್ಪದೇ, ಬೇರೊಬ್ಬ ವರನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಸೋಮವಾರ (ಡಿ.11) ಪ್ರಿಯಾಂಕ ಮದುವೆ ಕೂಡ ಗೊತ್ತಾಗಿತ್ತು. ಆದರೆ, ಭಾನುವಾರ ರಾತ್ರಿಯೇ ಯುವಕ – ಯುವತಿ ಮನೆ ಬಿಟ್ಟು ಓಡಿಹೋಗಿದ್ದಾರೆ.
ಇದರಿಂದ ರೊಚ್ಚಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ, ಬೆತ್ತಲೆ ಮಾಡಿ ಊರಿನ ಬೀದಿಗಳಲ್ಲಿ ಓಡಾಡಿಸಿ, ಕಂಬಕ್ಕೆ ಕಟ್ಟಿ ಮತ್ತೆ ಹೊಡೆದಿದ್ದಾರೆ. ಅವರ ಮನೆಗೆ ಬೆಂಕಿ ಹಚ್ಚಿ ಅಪಾರ ಹಾನಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರು ಕೂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಓಡಿ ಹೋಗಿರುವ ಯುವಕ, ಯುವತಿಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಗ್ರಾಮದಲ್ಲಿ 2 ಕೆಎಸ್ ಆರ್ ಪಿ ತುಕಡಿ ಮತ್ತು ಪೊಲೀಸ್ ಬಂದೋಬಸ್ತ್ ಸಹ ನಿಯೋಜಿಸಲಾಗಿದೆ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ : ಸಿಎಂ
ಪ್ರಕರಣ ಸಂಬಂಧ ಸಿಎಂ ಸಿದ್ಧರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ. ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು” ಎಂದಿದ್ದಾರೆ.