ಕಾಪು : ಹೆಸರಾಂತ ಸಮಾಜ ಸೇವಕ, ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ ಲೀಲಾಧರ ಶೆಟ್ಟಿ(68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ(58) ಆತ್ಮಹತ್ಯೆ ಮಾಡಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಸಮಾಜ ಸೇವಕ :
ಅಶಕ್ತರ ನೆರವಿಗೆ ಧಾವಿಸುವ ಅವರು ಯಾವಾಗಲೂ ಸಮಾಜದ ಪರವಾಗಿ ಕಾಳಜಿ ಹೊಂದಿದ್ದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಅತ್ಯಂತ ಆಪ್ತರಾಗಿದ್ದ ಅವರು ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷ, ಭಜನಾ ಮಂಡಳಿಯ ಸಂಚಾಲಕ, ಅತ್ಯುತ್ತಮ ನಟ ಮತ್ತು ನಿರ್ದೇಶಕ ಆಗಿದ್ದರು.
ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಅವರ ಕಾಪು ರಂಗತರಂಗ ತಂಡ ಹೆಸರು ವಾಸಿಯಾಗಿತ್ತು.
ಇತ್ತೀಚೆಗೆ ತನ್ನ ಹೊಸ ನಾಟಕ ರಚನೆಯನ್ನು ಮಾಡಿದ್ದ ಇವರು ಅದರಲ್ಲಿ ಯಶಸ್ವಿಯಾಗುವ ಆಶಾಭಾವನೆ ಹೊಂದಿದ್ದರು.
ರಾಜಕೀಯದಲ್ಲೂ….
ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ ಅವರು ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿಯೂ ಚುನಾವಣೆಗೆ ಸ್ಪರ್ಥಿಸಿದ್ದರು. ಬಹಳಷ್ಟು ಮಂದಿ ರಾಜಕೀಯ ಮತ್ತು ಸಾಮಾಜಿಕ ನಾಯಕರುಗಳಿಗೆ ಮಾರ್ಗದರ್ಶಕರಾಗಿದ್ದ ಅವರು ಮಜೂರು ನಾಗರಿಕ ಸಮಿತಿ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದು ಗ್ರಾ. ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ ಪುರಸ್ಕಾರ ಸಹಿತವಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಭಾಜನರಾಗಿದ್ದರು.
ಅವರು ದಂಪತಿ ಸಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ಸಾವಿರಾರು ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ. ಬುಧವಾರ ಸಂಜೆ 4 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.