ಬೆಳಗಾವಿ: ರಾಜ್ಯ ಸರ್ಕಾರ ರೈತರಿಗೆ ಶುಭಸುದ್ದಿ ನೀಡಿದ್ದು, ಸಹಕಾರ ಬ್ಯಾಂಕುಗಳಲ್ಲಿರುವ ರೈತರ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಚಳಿಗಾಲ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಹಿನ್ನೆಲೆಯಲ್ಲಿ ರೈತರು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಬಡ್ಡಿ ಒಟ್ಟು 300 ಕೋಟಿಯಷ್ಟು ಇರಬಹುದು. ಅದನ್ನು ಮನ್ನಾ ಮಾಡುತ್ತೇವೆ ಎಂದಿದ್ದಾರೆ.
ಸರ್ಕಾರದಿಂದ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಣೆಯನ್ನು ಟೀಕಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಬರಗಾಲದ ಹಿನ್ನೆಲೆಯಲ್ಲಿ ರೈತರು ಸಹಕಾರಿ ಬ್ಯಾಂಕ್‌ನ ಸಾಲವನ್ನು ಕಟ್ಟಲು ಸಾಧ್ಯವಾಗಲ್ಲ. ನೀವು ಕೂಡ ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಮಾಡಲ್ಲ ಎಂದರು.
ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರದ ಮೇಲೆ ಸಂಶಯ ಬೇಡ. ನಾವು ನುಡಿದಂತೆ ನಡೆಯುತೇವೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು
ಇನ್ನು ಬಳ್ಳಾರಿ, ರಾಯಚೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿದ್ದರಾಮಯ್ಯ ಘೋಷಿಸಿದರು. ರೈತರ ಬಡ್ಡಿ ಮನ್ನಾ ಘೋಷಣೆಗೆ ಮಾಜಿ ಸಹಕಾರ ಸಚಿವ ಶಾಸಕ ಎಸ್‌ಟಿ ಸೋಮಶೇಖರ್ ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.