ನವದೆಹಲಿ: ಕೇರಳದಲ್ಲಿ ಕೋವಿಡ್ ರೂಪಾಂತರಿ JN.1 ಪತ್ತೆಯಾಗಿದೆ. ಡಿಸೆಂಬರ್ 8 ರಂದು ಕೇರಳದಲ್ಲಿ COVID-19 ರೂಪಾಂತರಿ JN.1ರ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
79 ವರ್ಷದ ಮಹಿಳೆಯ ಮಾದರಿಯು ನವೆಂಬರ್ 18 ರಂದು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಮಹಿಳೆ ಇನ್ಫ್ಲುಯೆನ್ಸ್ ತರಹದ ಕಾಯಿಲೆಗಳ (ಐಎಲ್‌ಐ) ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು. ಇದೀಗ ಚಿಕಿತ್ಸೆ ಬಳಿಕ COVID-19 ನಿಂದ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಈ ಹಿಂದೆ, ಸಿಂಗಾಪುರದಲ್ಲಿ ಜೆಎನ್.1 ರೂಪಾಂತರಿ ವೈರಸ್ ಭಾರತೀಯ ಪ್ರಯಾಣಿಕರಲ್ಲಿ ಕಂಡುಬಂದಿತ್ತು. ವ್ಯಕ್ತಿ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯವರಾಗಿದ್ದು, ಅಕ್ಟೋಬರ್ 25 ರಂದು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದರು. ತಿರುಚಿರಾಪಳ್ಳಿ ಜಿಲ್ಲೆ ಅಥವಾ ತಮಿಳುನಾಡಿನ ಇತರ ಸ್ಥಳಗಳಲ್ಲಿ ರೂಪಾಂತರಿ ಪತ್ತೆಯಾದ ನಂತರ ಪ್ರಕರಣಗಳಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಹೇಳಲಾಗಿದೆ.
ಕೋವಿಡ್ ಹೆಚ್ಚಳ :
ಇದರ ಬೆನ್ನಲ್ಲೇ ದೇಶದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಾದ್ಯಂತ 339 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿವೆ.
ಶನಿವಾರ ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಿಸಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 339 ಹೊಸ COVID-19 ಸೋಂಕು ಪ್ರಕರಣಗಳ ವರದಿಯಾಗಿದೆ.
ಆ ಮೂಲಕ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,492 ಕ್ಕೆ ಏರಿಕೆ ಆಗಿದೆ. ಕೋವಿಡ್ ಸಾವಿನ ಸಂಖ್ಯೆ 5,33,311 (5.33 ಲಕ್ಷ) ಕ್ಕೆ ದಾಖಲಾಗಿದೆ. ದೇಶದಲ್ಲಿನ ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ ಪ್ರಸ್ತುತ 4,50,04,481 (4.50 ಕೋಟಿ) ಆಗಿದೆ.
ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ ಪ್ರಸ್ತುತ 4,44,69,678 (4.44 ಕೋಟಿ) ಆಗಿದ್ದು, ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 98.81 ಪ್ರತಿಶತದಷ್ಟಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಅಂತೆಯೇ ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ದೇಶದಲ್ಲಿ ಇದುವರೆಗೆ 220.67 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದೆ.