ಜೋಹಾನ್ಸ್ ಬರ್ಗ್: ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾಗೆ ಅರ್ಶ್ ದೀಪ್ ಸಿಂಗ್ 2ನೇ ಓವರ್ ನಲ್ಲಿ ಎರಡು ವಿಕೆಟ್ ಕಬಳಿಸಿ ಶಾಕ್ ಕೊಟ್ಟರು.
ರೀಜಾ ಹೆಂಡ್ರಿಕ್ಸ್ (0) ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (0) ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಗೆ ದೊಡ್ಡ ಹೊಡೆತ ನೀಡಿದರು. ಬಳಿಕ ದಕ್ಷಿಣ ಆಫ್ರಿಕಾ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಟೋನಿ ಡಿ ಜೋರ್ಜಿ 28 ರನ್ ಗಳಿಸಿ ಔಟಾದರೆ, ನಾಯಕ ಐಡೆನ್ ಮಾರ್ಕ್ರಾಮ್ ಕೇವಲ 12 ರನ್ ಗಳಿಗೆ ಔಟಾದರು.
ಅಂತಿಮ ಹಂತದಲ್ಲಿ ಆಂಡಿಲ್ ಫೆಹ್ಲುಕ್ವಾಯೊ 33 ರನ್ ಗಳಿಸಿ ಏಕಾಂಗಿ ಹೋರಾಟ ಮಾಡಿದರಾದರೂ ಅವರಿಗೆ ಇತರೆ ಆಟಗಾರರಿಂದ ಸಾಥ್ ನೀಡಲಿಲ್ಲ.
ದಕ್ಷಿಣ ಆಫ್ರಿಕಾ 116 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಶ್ ದೀಪ್ ಸಿಂಗ್ 5 ವಿಕೆಟ್ ಕಬಳಿಸಿದರೆ, ಆವೇಶ್ ಖಾನ್ 4 ಮತ್ತು ಕುಲದೀಪ್ ಯಾದವ್ 1 ವಿಕೆಟ್ ಪಡೆದರು.
ದ.ಆಫ್ರಿಕಾ ನೀಡಿದ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ 2 ವಿಕೆಟ್ ನಷ್ಟಕ್ಕೆ 16.4 ಓವರ್‌ನಲ್ಲಿ 117 ರನ್ ಗಳಿಸಿ ಗೆದ್ದಿತು.
ಸಾಯಿ ಸುದರ್ಶನ್ ಔಟಾಗದೆ 55(43), ಶ್ರೇಯಸ್ ಅಯ್ಯರ್ 52(45), ರುತ್ ರಾಜ್ ಗಾಯಕ್ ವಾಡ್ 5(10), ವರ್ಮಾ 1(3) ರನ್ ಗಳಿಸಿದರು.