ನವದೆಹಲಿ : ಎನ್ಐಎ ಸೋಮವಾರ ಮತ್ತೆ ತನ್ನ ಬೇಟೆ ಮುಂದುವರಿಸಿದೆ.
ಕರ್ನಾಟಕದ 11 ಭಾಗಗಳು ಸೇರಿದಂತೆ 4 ರಾಜ್ಯಗಳ 19 ಕಡೆಗಳಲ್ಲಿ ಎನ್ ಐಎ ದಾಳಿ ನಡೆಸಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಮತ್ತು ಇರಾಕ್ (ISIS) ಜಾಲದೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಆಧಾರದ ಮೇಲೆ ಮೂಲಭೂತವಾದಿ ಜಿಹಾದಿ ಸಂಪರ್ಕಜಾಲವನ್ನು ಬೇಧಿಸಲಾಗಿದೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ ಕೇಂದ್ರ ಉಗ್ರಗಾಮಿ ನಿಗ್ರಹ ಪಡೆ ಬೆಂಗಳೂರು, ಬಳ್ಳಾರಿಯ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದೆ. ಜಾರ್ಖಂಡ್ ನ ನಾಲ್ಕು ಕಡೆಗಳಲ್ಲಿ, ಮಹಾರಾಷ್ಟ್ರದ ಮೂರು ಕಡೆ ಮತ್ತು ದೆಹಲಿಯಲ್ಲಿ ಒಂದು ಕಡೆ ದಾಳಿ ಮಾಡಲಾಗಿದ್ದು ಈ ವೇಳೆ ಲೆಕ್ಕಕ್ಕೆ ಸಿಗದ ನಗದು, ಡಿಜಿಟಲ್ ಸಾಧನಗಳು, ಸೂಕ್ಷ್ಮ ವಸ್ತುಗಳು ಸೇರಿದಂತೆ ಹಲವು ದಾಖಲೆಗಳನ್ನು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಬೆಂಗಳೂರಿನ ಹಲವೆಡೆ ದಾಳಿ :
ಬೆಂಗಳೂರು ನಗರದ ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್ ಪಾಳ್ಯ, ಆರ್.ಟಿ.ನಗರ, ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ಹಾಗೂ ಬಳ್ಳಾರಿಯಲ್ಲಿ ಒಂಬತ್ತು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರಂತೆ, ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಶಮಿವುಲ್ಲಾ ವಾಸವಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದಾಗ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದೆ.
ಭಾರತದಲ್ಲಿ ಇದುವರೆಗೆ ಐಸಿಸ್ ಜಾಲದಲ್ಲಿ ನಡೆದ ತನಿಖೆಯಿಂದ ಈ ಅಂಶ ಬೆಳಕಿಗೆ ಬಂದಿದ್ದು, ಕೆಲವು ವಿದೇಶಿಯರು ಮುಸ್ಲಿಂ ಯುವಕರನ್ನು ಜಿಹಾದಿಗಳನ್ನಾಗಿ ಪರಿವರ್ತಿಸಲು ನೋಡುತ್ತಿರುವುದು, ತಮ್ಮ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿ ಅಸ್ಥಿರತೆಯ ಭಾವವನ್ನು ಸೃಷ್ಟಿಸಲು ನೋಡುತ್ತಿರುವುದು ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಸೇರಿದಂತೆ ಮಹಾರಾಷ್ಟ್ರದ 44 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು.