ಮಂಗಳೂರು: ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸದ್ಯಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ. ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಕೆಲಸವನ್ನು ವಿಶೇಷ ಆದ್ಯತೆಯಲ್ಲಿ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ಸ್ವರ್ಗ, ಸುಳ್ಯಪದವು, ಸುಳ್ಯದ ಜಾಲ್ಸೂರು ಚೆಕ್‌ಪೋಸ್ಟ್ ಗಳಲ್ಲಿ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಜಾಗೃತಿ ಬಗ್ಗೆ ಪ್ರಚಾರ ಮಾಡಲು ಕ್ರಮ ಕೈಗೊಂಡಿದ್ದೇವೆ. ಮುನ್ನೆಚ್ಚರಿಕೆ ಉದ್ದೇಶಕ್ಕೆ ಈಗಾಗಲೇ ತಾಲೂಕುವಾರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಆಕ್ಸಿಜನ್ ಬೆಡ್, ಐಸಿಯು ಲಭ್ಯತೆ, ಆಕ್ಸಿಜನ್ ಘಟಕಗಳನ್ನು ಸನ್ನದ್ಧವಾಗಿಡುವಂತೆ ಸೂಚನೆ ನೀಡಿದ್ದೇವೆ. ಜಿಲ್ಲಾ
ವೆನ್ಲಾಕ್ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದರು.
ಈಗಾಗಲೇ ವಿಟಿಎಂ 300 ಕಿಟ್‌ಗಳು ಇದ್ದು, ಸದ್ಯದಲ್ಲೇ 1 ಸಾವಿರ ವಿಟಿಎಂ ಕಿಟ್‌ಗಳು ಜಿಲ್ಲೆಗೆ ಬರಲಿದೆ. ಆರ್‌ಟಿಪಿಸಿಆರ್ ಒಂದು ಲಕ್ಷ ಕಿಟ್‌ಗಳಿದ್ದು, ಪರೀಕ್ಷೆ ನಡೆಸಲು ಇರುವ ಸಮಸ್ಯೆಗಳು ಬಗೆಹರಿಯುತ್ತದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಟ್ಟು 10,986 ಬೆಡ್‌ಗಳು, 1,376 ಆಕ್ಸಿಜನ್ ಬೆಡ್, 722 ಐಸಿಯು ಬೆಡ್ ಮತ್ತು 336 ವೆಂಟಿಲೇಟರ್ ಹೊಂದಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ದಿನಕ್ಕೆ ಒಟ್ಟು 321 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಲ್ಲಿ 100 ರ್ಯಾಪಿಡ್ ಟೆಸ್ಟ್ ಮತ್ತು 221 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುತ್ತೇವೆ. ಎಲ್ಲ ಸಾರಿ ಪ್ರಕರಣಗಳು ಹಾಗೂ 20 ಐಎಲ್‌ಐ ಪ್ರಕರಣಗಳ ಪೈಕಿ 1 ಐಎಲ್‌ಐ ಪ್ರಕರಣವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಐಎಲ್‌ಐ ಲಕ್ಷಣಗಳಿದ್ದರೆ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ, ಅಗತ್ಯ ಪರೀಕ್ಷೆ, ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗಲಕ್ಷಣವಿದ್ದರೆ ಮಾಸ್ಕ್ ಧರಿಸಬೇಕು, 60 ವರ್ಷ ಮೇಲ್ಪಟ್ಟವರು ಹಾಗೂ ಇತರ ರೋಗಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಮಾಸ್ಕ್ ಬಳಸಬೇಕು ಎಂದರು.