ಭಾರತ ತಂಡದ ಹಂಗಾಮಿ ನಾಯಕ ಕೆಎಲ್ ರಾಹುಲ್, ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ಗೆದ್ದು ಸಂಭ್ರಮಿಸಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ಬಳಿಕ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಅದರ ತವರಿನಲ್ಲೇ ಮಣಿಸಿದ ಎರಡನೇ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ.
ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ 1992 ರಲ್ಲಿ ಮೊದಲ ಬಾರಿ ಟೀಮ್ ಇಂಡಿಯಾ ಹರಿಣಿಗಳ ನಾಡಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಚೊಚ್ಚಲ ಏಕದಿನ ಸರಣಿಯಲ್ಲಿ 2-5 ಅಂತರದಿಂದ ಸೋತು ಮುಖಭಂಗ ಅನುಭವಿಸಿತ್ತು. ನಂತರ ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲೂ ಹರಿಣಗಳ ನಾಡಿನಲ್ಲಿ ಏಕದಿನ ಸರಣಿ ಗೆದ್ದಿರಲಿಲ್ಲ. ಆದರೆ 2018ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 6 ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತ್ತು. ಆ ಮೂಲಕ ಹರಿಣಗಳ ನಾಡಿನಲ್ಲಿ ಏಕದಿನ ಸರಣಿ ಗೆದ್ದ ಮೊದಲ ಭಾರತದ ನಾಯಕ ಎಂಬ ದಾಖಲೆ ನಿರ್ಮಿಸಿದ್ದರು.
ಭಾರತಕ್ಕೆ ಐತಿಹಾಸಿಕ ಸರಣಿ ಜಯ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ನಿರ್ಧಾರಕ ಪಂದ್ಯವನ್ನು 78 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಭಾರತ ಸರಣಿಯನ್ನೂ ಗೆದ್ದುಕೊಂಡಿದೆ. ಭಾರತದ ಪರ ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್ ಮಿಂಚಿದರೆ, ಬ್ಯಾಟಿಂಗ್ನಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಶತಕದ ಇನ್ನಿಂಗ್ಸ್ ಆಡಿದರು. ಭಾರತ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದ ದಾಖಲೆ ಬರೆದಿದೆ.