ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಅತಿಥೇಯರ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯನ್ನು ಮುಗಿಸಿದೆ. ಇನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಆದರೆ ಈ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ.
ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ಕೌಟುಂಬಿಕ ಕಾರಣದಿಂದ ಅವರು ತವರಿಗೆ ಮರಳಿದ್ದಾರೆ. ಅಷ್ಟೇ ಅಲ್ಲದೆ, ತಂಡದ ಯುವ ಬ್ಯಾಟ್ಸ್ಮನ್ ರುತುರಾಜ್ ಗಾಯಕ್ವಾಡ್ ಕೂಡ ಇಂಜುರಿಯಿಂದಾಗಿ ಮುಂಬರುವ ಸರಣಿಯಿಂದ ಹೊರಗುಳಿದಿದ್ದಾರೆ. ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಗುರಿ ಹೊಂದಿದ್ದ ಭಾರತಕ್ಕೆ ಇದು ಆಘಾತವೇ ಸರಿ.
ಅಭ್ಯಾಸ ಪಂದ್ಯಕ್ಕೂ ಅಲಭ್ಯ :
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಮಾದರಿಗಳಿಂದ ಕಿಂಗ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ, ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಸರಣಿಯ ಆರಂಭಕ್ಕೂ ಮುನ್ನ ಕೌಟುಂಬಿಕ ತುರ್ತಿನಿಂದಾಗಿ ವಿರಾಟ್ ಕೊಹ್ಲಿ ತವರಿಗೆ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ಸರಣಿಗೂ ಮುನ್ನ ನಡೆಯಲಿರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಕೊಹ್ಲಿ ಅಲಭ್ಯರಾಗಲಿದ್ದಾರೆ.
ವರದಿಗಳ ಪ್ರಕಾರ :
ಇನ್ನು, ವಿರಾಟ್ ಕೊಹ್ಲಿ ವಿಚಾರದಲ್ಲಿ ಗಾಬರಿ ಪಡುವ ಅಗತ್ಯವಿಲ್ಲ. ವರದಿಗಳನ್ನು ನಂಬುವುದಾದರೆ, ವಿರಾಟ್ ಕೊಹ್ಲಿಯನ್ನು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿಲ್ಲ. ಬದಲಿಗೆ ಅವರು ಎರಡೂ ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ವಿರಾಟ್ ಕೊಹ್ಲಿ 3 ದಿನಗಳ ಹಿಂದೆ ಮುಂಬೈಗೆ ಮರಳಿದ್ದು, ಶುಕ್ರವಾರ ದಕ್ಷಿಣ ಆಫ್ರಿಕಾಗೆ ಮತ್ತೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.