ಬೆಂಗಳೂರು : ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹಿಜಾಬ್ ನಿಷೇಧ ಸಾಕಷ್ಟು ಸದ್ದು ಮಾಡಿತ್ತು. ಉಡುಪಿಯಿಂದ ಆರಂಭಗೊಂಡಿದ್ದ ಈ ವಿವಾದ ಸುಪ್ರೀಂ ಕೋರ್ಟ್‌ವರೆಗೂ ಲಗ್ಗೆ ಇಟ್ಟಿತ್ತು. ಇದೀಗ ಶುಕ್ರವಾರವಷ್ಟೇ ಸಿಎಂ ಸಿದ್ದರಾಮಯ್ಯ ‘ಹಿಜಾಬ್ ನಿಷೇಧ ಹಿಂಪಡೆಯಲು ತಿಳಿಸಿದ್ದೇನೆ’ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಬಿಜೆಪಿ ಆಕ್ರೋಶಿತಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವಿಟ್ಟರ್‌ನಲ್ಲಿ ಈ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವು ನಮ್ಮ ಶೈಕ್ಷಣಿಕ ಜಾಗಗಳ ಜಾತ್ಯತೀತ ಸ್ವರೂಪದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆಗೆ ಅವಕಾಶ ನೀಡುವ ಮೂಲಕ ಸರ್ಕಾರ ಯುವ ಮನಸ್ಸುಗಳನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವುದನ್ನು ಉತ್ತೇಜಿಸುತ್ತಿದೆ, ಎಲ್ಲರನ್ನೂ ಒಳಗೊಳ್ಳುವ ಕಲಿಕೆಯ ವಾತಾವರಣಕ್ಕೆ ಇದು ಹಿನ್ನಡೆಯಾಗಲಿದೆ. ವಿಭಜಿಸುವ ಪ್ರಕ್ರಿಯೆ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡುವುದು ಮತ್ತು ಧಾರ್ಮಿಕ ಆಚರಣೆಗಳ ಪ್ರಭಾವವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣದ ಮೇಲೆ ಕೇಂದ್ರೀಕರಿಸುವ ವಾತಾವರಣವನ್ನು ಬೆಳೆಸುವುದು ಮುಖ್ಯವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.