ಮೈಸೂರು : ಹಿಜಾಬ್ ನಿಷೇಧ ವಾಪಾಸ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ, ಹಿಜಾಬ್ ನಿಷೇಧ ಆದೇಶವನ್ನು ಸರ್ಕಾರ ಇನ್ನೂ ಹಿಂಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಯಾರೋ ಒಬ್ಬರು ಪ್ರಶ್ನೆ ಮಾಡಿದ್ದಕ್ಕೆ ಆ ಉತ್ತರ ಕೊಟ್ಟಿದ್ದೇನೆ. ಹಿಜಾಬ್ ನಿಷೇಧ ಆದೇಶ ವಾಪಸ್ಗೆ ಯೋಚನೆ ಮಾಡಿದ್ದೇವೆ. ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಉಲ್ಟಾ ಹೊಡೆದ ಸಿಎಂ :
ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು ಉಡುಪು ಆಹಾರ ಅವರವರ ಇಷ್ಟ ಎಂದು ಪ್ರತಿಪಾದನೆ ಮಾಡಿದ್ದರು. ಹಿಜಾಬ್ ನಿಷೇಧದ ಆದೇಶವನ್ನು ವಾಪಸ್ ಪಡೆದುಕೊಳ್ಳುತ್ತೇವೆ. ಇನ್ನು ಮುಂದೆ ಹಿಜಾಬ್ ಧರಿಸಬಹುದು ಎಂದು ಹೇಳಿದ್ದರು. ಉಡುಪು ಆಹಾರ ಪದ್ದತಿ ನಿಮ್ಮ ಆಯ್ಕೆ. ನಾನೇಕೆ ಇವುಗಳಿಗೆ ಅಡ್ಡಿಯಾಗಲಿ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಸಿಎಂ ಉಲ್ಟಾ ಹೊಡೆದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸ್ಥಳದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಜನರು ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ಆ ಸಮಸ್ಯೆಗಳ ಬಗ್ಗೆ ನಾನು ಮಾತನಾಡುತ್ತಿದ್ದೆ. ಈ ವೇಳೆ ಹಿಜಾಬ್ ಕುರಿತಂತೆ ಪ್ರಶ್ನೆ ಕೇಳಿದರು. ಆದರೆ ಇನ್ನು ಹಿಜಾಬ್ ನಿಷೇಧ ವಾಪಸ್ ಇನ್ನು ಮಾಡಿಲ್ಲ. ಜನರ ಪ್ರಶ್ನೆಗೆ ಉತ್ತರಿಸಿ, ಸರ್ಕಾರ ನಾವು ಹಿಜಾಬ್ ಬ್ಯಾನ್ ವಾಪಸ್ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದು ಹೇಳಿದ್ದೆ. ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.