ಜೈಪುರ : ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 14 ವರ್ಷದ ಬಾಲಕನೊಬ್ಬ ತನ್ನ ತರಗತಿಯ ಹೊರಗೆ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಜೈಪುರದ ಕರ್ಧಾನಿ ಎಂಬ ಪ್ರದೇಶದಲ್ಲಿ ವರದಿಯಾಗಿದೆ.
ಯೋಗೇಶ್ ಸಿಂಗ್ ಮೃತ ಬಾಲಕ. ಆತ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಡಿಸೆಂಬರ್ 19 ರಂದು ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಕೊಠಡಿಗೆ ಬಾಲಕ ನಡೆದು ಹೋಗುತ್ತಿರುವಾಗಲೇ ಈ ಘಟನೆ ನಡೆದಿದೆ ಎಂದು ಶಿಕ್ಷಕರು ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ಧಾರೆ ಎಂದು ಕರ್ಧಾನಿ ಠಾಣೆಯ ಮುಖ್ಯ ಪೊಲೀಸ್ ಪೇದೆ ಮನೋಜ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬಾಲಕ ಕುಸಿದು ಬಿದ್ದ ಕೂಡಲೇ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಆತನನನು ಸಮೀಪದ ಆಸ್ಪತ್ರೆಗೆ ರವಾನಿಸಿದರು.
ಆದರೆ, ಆಸ್ಪತ್ರೆ ಸಿಬ್ಬಂದಿ ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಕರೆದೊಯ್ಯುವಂತ ಸಲಹೆ ನೀಡಿದರು. ಆದರೆ, ಮಾರ್ಗ ಮಧ್ಯದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಮುಖ್ಯ ಪೇದೆ ಮನೋಜ್ ಕುಮಾರ್ ಹೇಳಿದ್ದಾರೆ.
ಶಾಲೆಯಲ್ಲಿ ತರಗತಿಗಳು ಆರಂಭ ಆಗುತ್ತಿದ್ದವು. ಬಾಲಕ ಯೋಗೇಶ್ ವ್ಯಾಸಂಗ ಮಾಡುತ್ತಿದ್ದ ತರಗತಿಗೆ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದಾಗಲೇ ಬಂದಿದ್ದರು. ಬಾಲಕ ಇನ್ನೇನು ತರಗತಿಗೆ ಪ್ರವೇಶ ಪಡೆಯಬೇಕಿತ್ತು. ಅಷ್ಟರಲ್ಲೇ ಆತ ಕುಸಿದು ಬಿದ್ದ ಎಂದು ಶಿಕ್ಷಕರು ಹೇಳಿದ್ದಾರೆ. ಆಗ ತಾನೇ ಪಾಠ ಮಾಡಲು ತರಗತಿಗೆ ಬಂದಿದ್ದ ಶಿಕ್ಷಕರಿಗೆ ವಿದ್ಯಾರ್ಥಿ ಬೀಳುತ್ತಿರೋದು ಕಂಡು ಬಂತು. ಕೂಡಲೇ ಅವರು ವಿದ್ಯಾರ್ಥಿಯ ರಕ್ಷಣೆಗೆ ಧಾವಿಸಿದರು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕುಳಿಯಲಿಲ್ಲ. ವಿದ್ಯಾರ್ಥಿಯ ಸಾವಿನ ಸುದ್ದಿ ತಿಳಿದ ಕೂಡಲೇ ಪೊಲೀಸರು ಶಾಲೆಗೆ ಧಾವಿಸಿದರು.
ಇನ್ನು ಮೃತ ಬಾಲಕನ ಅಸಹಜ ಸಾವಿನ ಕುರಿತಾಗಿ ತನಿಖೆ ನಡೆಸಿದ ಪೊಲೀಸರು ಬಾಲಕನ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸುವಂತೆ ವೈದ್ಯರಿಗೆ ಮನವಿ ಮಾಡಿದ್ದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲೂ ಇದೊಂದು ಹೃದಯಾಘಾತದ ಪ್ರಕರಣ ಕಂಡುಬಂದಿದೆ ಎಂದು ತಿಳಿದುಬಂದಿದೆ.