ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಚುನಾವಣಾ ಪ್ರಣಾಳಿಕೆಯ 5ನೇ ‘ಗ್ಯಾರಂಟಿ’ ಭರವಸೆ ‘ಯುವನಿಧಿ’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಚಾಲನೆ ನೀಡಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಸಿಎಂ ಮತ್ತು ಗಣ್ಯರು, ಓರ್ವ ಯುವತಿ ಹಾಗೂ ಯುವಕನನ್ನ ವೇದಿಕೆ ಮೇಲೆ ಕರೆಸಿ ಜ್ಯೋತಿ ಬೆಳಗುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಬಳಿಕ ಸಿಎಂ ಹಾಗೂ ಡಿಸಿಎಂ ಯುವನಿಧಿ ಯೋಜನೆ ಪೋಸ್ಟರ್ ಬಿಡುಗಡೆ ಮಾಡಿದರು. ಇದೇ ವೇಳೆ ಸಿಎಂ ಅವರು ಯುವನಿಧಿ ಯೋಜನೆಯ ಲೋಗೋ ಬಿಡುಗಡೆ ಮಾಡಿದರು.
ನಂತರ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀವು ಎರಡು ವರ್ಷದೊಳಗೆ ಉದ್ಯೋಗ ಪಡೆದುಕೊಳ್ಳಬೇಕು. ಅದಕ್ಕೆ ಬೇಕಾದ ತರಬೇತಿಯನ್ನ ಕೌಶಲ್ಯಾಭಿವೃದ್ಧಿ ಇಲಾಖೆ ಮಾಡುತ್ತೆ. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೂ ಪ್ರೋತ್ಸಾಹ ನೀಡುತ್ತಿದ್ದೇವೆ. ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಿದರೆ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತೆ. ಹೈದರಾಬಾದ್-ಕರ್ನಾಟಕ ಭಾಗದ ಹುದ್ದೆಗಳ ಭರ್ತಿ ಮಾಡುತ್ತೇವೆ. ಈ ಭಾಗದಲ್ಲಿ ಉದ್ಯೋಗ ಭತ್ಯೆಯನ್ನು ನೀಡಲಾಗುತ್ತಿದೆ. ಹೀಗಾಗಿ ಅಲ್ಲಿ ವೈದ್ಯರು, ಶಿಕ್ಷಕರು, ಪ್ರೊಫೆಸರ್ಗಳು ಆಗಲು ಸಾಧ್ಯವಾಯ್ತು. ನಿರುದ್ಯೋಗ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತೆ ಎಂದರು.
ಮೋದಿ ವಿರುದ್ಧ ವಾಗ್ದಾಳಿ :
ಪ್ರಧಾನಿ ಮೋದಿಯವರೇ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಗ್ಯಾರಂಟಿ ಜಾರಿಯಾದರೆ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಸುಳ್ಳಾಗಿದೆ.
ಯುವನಿಧಿ ಜತೆಗೆ ಉಚಿತ ತರಬೇತಿ, ಅರ್ಜಿ ಶುಲ್ಕವೂ ಉಚಿತ. ರಾಜ್ಯದ ಜನರಿಗೆ ಇದು ಮುಟ್ಟಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ ಮೋದಿಯವರೇ ನೀವು ಉದ್ಯೋಗ ಸೃಷ್ಟಿಸಿದ್ರಾ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಯ್ತು ಮೋದಿಯವರೇ? ನೀವು ಮಾತಿಗೆ ತಪ್ಪಿದ ಮೋದಿ ಆಗಿದ್ದೀರಿ.
ಭಾರತದ ಇತಿಹಾಸದಲ್ಲಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ. ಮೋದಿಯವರೇನು ಆರ್ಥಿಕ ತಜ್ಞರಾ? ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಭಾಷಣ ಮಾಡಿದ್ರು. ಈಗ ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ.
ವಿವೇಕಾನಂದ ಜಯಂತಿಯಂದು ಲಕ್ಷಾಂತರ ಯುವಕ ಯುವತಿಯರ ಸಮ್ಮುಖದಲ್ಲಿ ಯುವನಿಧಿಯನ್ನು ನೇರವಾಗಿ ಅರ್ಹರ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ನಡೆಸುತ್ತೇವೆ. ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನೂ ಭರ್ತಿ ಮಾಡಲಾಗುವುದು. ಮಾತು ತಪ್ಪಿದ ಮೋದಿಯವರೇ ನಿಮ್ಮ ಮಾತು ಏನಾಯ್ತು? ರಾಜ್ಯದ ಯುವ ಸಮೂಹ ನಿಮ್ಮನ್ನು ಪ್ರಶ್ನಿಸುತ್ತಿದೆ ಎಂದಿದ್ದಾರೆ.