ಬೆಂಗಳೂರು : ರಾಜ್ಯದಲ್ಲಿ ಜೆಎನ್.1 ಉಪತಳಿ ಹೆಚ್ಚಾಗುವ ಸಾಧ್ಯತೆಗಳಿವೆ. ನಿನ್ನೆಯ 60 ಸ್ಯಾಂಪಲ್ಸ್ ನಲ್ಲಿ 34 JN.1 ಪ್ರಕರಣಗಳು ಪತ್ತೆಯಾಗಿವೆ. ಟೆಸ್ಟ್ ಹೆಚ್ಚಿಗೆ ಮಾಡಿದಷ್ಟು ಸ್ಪ್ರೆಡಿಂಗ್ ಗೊತ್ತಾಗುತ್ತೆ. ಹೀಗಾಗಿ ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಕೋವಿಡ್ ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೊರೋನಾ ಬಂದರೆ ರೋಗಿಗಳು 7 ದಿನ ಕಡ್ಡಾಯವಾಗಿ ಹೋಂ ಐಸೊಲೇಷನ್ ನಲ್ಲಿರಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಹಾಗೆಂದು ಜನರು ಆತಂಕಪಡುವ ಅಗತ್ಯವಿಲ್ಲ, ಕಾಳಜಿ ವಹಿಸಿಕೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಜನರೇ ಜನದಟ್ಟಣಿಯಲ್ಲಿ ಸೇರದಂತೆ ತಮ್ಮನ್ನು ತಾವು ಸಾಧ್ಯವಾದಷ್ಟು ನಿರ್ಬಂಧ ವಹಿಸಿ. ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ನೋವು ಬಂದರೆ ಮನೆಯಲ್ಲಿಯೇ ಉಳಿದುಕೊಳ್ಳಿ. ಇದು ಖಾಸಗಿ ವಲಯಕ್ಕೂ ನಿಯಮ ಅನ್ವಯವಾಗುತ್ತದೆ, ಕಡ್ಡಾಯವಾಗಿ ಉದ್ಯೋಗಿಗಳಿಗೆ ಕೋವಿಡ್ ರಜೆ ನೀಡಬೇಕು ಎಂದರು.
ಕೋವಿಡ್ ಲಕ್ಷಣಗಳು, ಜ್ವರ, ಕೆಮ್ಮು ಮಕ್ಕಳಲ್ಲಿ ಕಂಡುಬಂದರೆ ಶಾಲೆಗೆ ಕಳುಹಿಸದೇ ಇರುವುದು ಉತ್ತಮ, ಮಕ್ಕಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿರ್ಬಂಧ ಹಾಕುವುದು ಉತ್ತಮ. ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ. ಶುಚಿತ್ವ ಕಾಪಾಡಿ, ಸ್ಯಾನಿಟೈಸರ್ ಬಳಸಿ ಎಂದರು.
ರಾಜ್ಯದಲ್ಲಿ ಕೋವಿಡ್ 19 ನಿಂದ 7 ಮಂದಿ ಮೃತಪಟ್ಟಿದ್ದು, ಈ ಪೈಕಿ ಮೂವರು ಕೋವಿಡ್ ಲಸಿಕೆ ಪಡೆದುಕೊಂಡರೆ ನಾಲ್ವರು ಲಸಿಕೆ ಹಾಕಿಕೊಂಡಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.