ರಾಯಚೂರು : ಶಾಲೆಯಲ್ಲಿಯೇ ಪ್ರಭಾರ ಮುಖ್ಯ ಶಿಕ್ಷಕ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ಮಕ್ಕಳಿಗೆ ಪಾಠ ಮಾಡಿ ಸುಸ್ತಾಗುತ್ತಿದೆ ಎಂದು ಮುಖ್ಯ ಶಿಕ್ಷಕರ ಕೊಠಡಿಗೆ ಬಂದು ಕುರ್ಚಿಯಲ್ಲಿ ಕುಳಿತಿದ್ದಾರೆ. ಬಳಿಕ ಕಡತಗಳನ್ನು ಪರಿಶೀಲನೆ ಮಾಡುವಾಗ ಹೃದಯಾಘಾತವಾಗಿ ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.
ಸುರೇಶ (57) ಮೃತ ಪ್ರಭಾರ ಮುಖ್ಯ ಶಿಕ್ಷಕ.
ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಪ್ರಭಾರ ಮುಖ್ಯ ಶಿಕ್ಷಕನಿಗೆ ಹೃದಯಘಾತ ಸಂಭವಿಸಿದೆ. ತಾವು ಕುಳಿತುಕೊಂಡ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗದ್ರಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಮೊದಲ ತರಗತಿ ಪಾಠ ಮುಗಿಸಿ, ಯಾಕೋ ತುಂಬಾ ಸುಸ್ತಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿ ಮುಖ್ಯ ಶಿಕ್ಷಕರ ಕೋಣೆಯತ್ತ ಬಂದು ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ.
ಎದೆ ನೋವು ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷ್ಯ ಮಾಡಿ, ಇತರೆ ದಾಖಲೆಗಳನ್ನು ಬರೆದಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಶಾಲೆಗೆ ಸಂಬಂಧಿಸಿದ ದಾಖಲೆ ಬರೆಯುವ ವೇಳೆ ಹೃದಯಘಾತ ಸಂಭವಿಸಿದೆ. ನಂತರ, ಕೆಲವೇ ಕ್ಷಣಗಳಲ್ಲಿ ಕುಳಿತ ಕುರ್ಚಿಯಲ್ಲೇ ಮುಖ್ಯ ಶಿಕ್ಷಕ ಸುರೇಶ್ ಪ್ರಾಣಬಿಟ್ಟಿದ್ದಾರೆ.
ಮೃತ ಶಿಕ್ಷಕ ಸುರೇಶ್ ಮೂಲತಃ ರಾಣೆಬೆನ್ನೂರಿನವರು. ಸುರೇಶ್ ಅವರಿಗೆ ಪತ್ನಿ, ಮೂವರು ಪುತ್ರರಿದ್ದಾರೆ. ಎಲ್ಲ ಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾ ಉತ್ತಮ ಪಾಠ ಪ್ರವಚನ ಮಾಡುತ್ತಿದ್ದರು. ಇನ್ನು ಮುಖ್ಯ ಶಿಕ್ಷಕರಿಲ್ಲದ ಕಾರಣ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾ ಎಲ್ಲ ಶಿಕ್ಷಕರ ನೆಚ್ಚಿನ ಸ್ನೇಹಿತರೂ ಆಗಿದ್ದರು. ಇನ್ನು ಶಾಲೆಯಲ್ಲಿ ಹೆಚ್ಚುವರಿ ಕೆಲಸಗಳಿದ್ದರೆ ಅವುಗಳನ್ನು ತಾವೇ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆಯಿಂದ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದು, ಸೂತಕದ ಛಾಯೆ ಅವರಿಸಿದೆ.