ನವದೆಹಲಿ : ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿದ ಮುಂಬೈ ಫ್ರಾಂಚೈಸಿ ಪಾಂಡ್ಯಗೆ ಕಪ್ತಾನನ ಪಟ್ಟ ನೀಡಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಇದರ ಬೆನ್ನಲ್ಲೇ ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬರಲಿದ್ದಾರೆ ಎಂಬ ಸುದ್ದಿಗಳು ಕೂಡ ಮುನ್ನಲೆಗೆ ಬಂದಿದ್ದವು. ಧೋನಿಯ ಉತ್ತರಾಧಿಕಾರಿಯಾಗಿ ಹಿಟ್ಮ್ಯಾನ್ ಸಿಎಸ್ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಇದೀಗ ಈ ಸುದ್ದಿಗಳ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಸಿ ವಿಶ್ವನಾಥನ್ ಮೌನ ಮುರಿದಿದ್ದಾರೆ. ರೋಹಿತ್ ಶರ್ಮಾಗಾಗಿ ಮುಂಬೈ ಇಂಡಿಯನ್ಸ್ ಮುಂದೆ ಸಿಎಸ್ಕೆ ಫ್ರಾಂಚೈಸಿ ಯಾವುದೇ ಪ್ರಸ್ತಾಪವನ್ನಿಟ್ಟಿಲ್ಲ. ಈ ಬಗ್ಗೆ ಯಾವುದೇ ಚರ್ಚೆಯನ್ನೂ ಕೂಡ ನಡೆಸಿಲ್ಲ. ಇವೆಲ್ಲವೂ ಕೇವಲ ವದಂತಿ ಎಂದಿದ್ದಾರೆ.
ಸಿಎಸ್ಕೆ ಫ್ರಾಂಚೈಸಿಯು ಯಾವುದೇ ಆಟಗಾರನಿಗಾಗಿ ಟ್ರೇಡ್ ಮಾಡಲು ಬಯಸುತ್ತಿಲ್ಲ. ಮುಂಬೈ ಇಂಡಿಯನ್ಸ್ ಜೊತೆ ಟ್ರೇಡಿಂಗ್ ನಡೆಸುವಂತಹ ಆಟಗಾರರು ಕೂಡ ನಮ್ಮಲ್ಲಿ ಇಲ್ಲ. ಹೀಗಾಗಿ ರೋಹಿತ್ ಶರ್ಮಾ ಸಿಎಸ್‌ಕೆಗೆ ಬರಲಿದ್ದಾರೆ ಎಂಬುದು ಕೇವಲ ಗಾಳಿ ಸುದ್ದಿಗಳಷ್ಟೇ ಎಂದು ಕಾಸಿ ವಿಶ್ವನಾಥನ್ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಾಣ, ಅಜಿಂಕ್ಯ ರಹಾನೆ, ಶೇಕ್ ರಷೀದ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಝ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್, ರಚಿನ್ ರವೀಂದ್ರ.