ಗುನ: ಖಾಸಗಿ ಬಸ್ ಹಾಗೂ ಡಂಪರ್ ಟ್ರಕ್ ನಡುವೆ ಅಪಘಾತ ಸಂಭವಿಸಿ, 12 ಮಂದಿ ಸಜೀವ ದಹನವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಈ ಘಟನೆ ಗುನ ಜಿಲ್ಲೆಯ ಗುಣ-ಅರೋನ್ ಮಾರ್ಗದಲ್ಲಿ ಸಂಭವಿಸಿದೆ.
ಬಸ್ ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಬಸ್ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ 12 ಪ್ರಯಾಣಿಕರು ಸಜೀವ ದಹನಗೊಂಡು, 17 ಜನ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಗುನ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತರುಣ್ ರಥಿ ತಿಳಿಸಿದ್ದಾರೆ.
ಮೃತದೇಹಗಳು ಬೆಂಕಿಯಲ್ಲಿ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದು, ಅವುಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು. ಅಪಘಾತ ಸ್ಥಳದಿಂದ ಎಲ್ಲಾ ದೇಹಗಳನ್ನು ಹೊರತೆಗೆಯಲಾಗಿದೆ. ಅಪಘಾತಕ್ಕೆ ಕಾರಣವನ್ನು ಕಂಡುಹಿಡಿಯಲು ಪರಿಶೀಲನೆ ಡೆಯುತ್ತಿದೆ ಎಂದು ಅವರು ಹೇಳಿದರು. ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪರಿಹಾರ ಘೋಷಣೆ :
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳನ್ನು ಪರಿಹಾರವಾಗಿ ಘೋಷಿಸಿದ್ದಾರೆ.