ಬೆಂಗಳೂರು : ಮರಕಡಿತ ಪ್ರಕರಣ ಸಂಬಂಧ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೋಟ್ಯಾಂತರ ರೂಪಾಯಿ ಮೌಲ್ಯದ 126 ಮರಗಳನ್ನು ಕಡಿದು ಸಾಗಿಸಿದ ಆರೋಪ ವಿಕ್ರಮ್ ಸಿಂಹ ಅವರ ಮೇಲಿದೆ. ಹೀಗಾಗಿ ವಿಕ್ರಮ್ ಸಿಂಹ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೀಗ ಈ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬೆಂಗಳೂರಿನ ಮಲ್ಲೇಶ್ವರಂ ಅರಣ್ಯ ಭವನಕ್ಕೆ ಕರೆದೊಯ್ದಿದ್ದು, ಅವರನ್ನು ವಿಚಾರಣೆ ಮಾಡುತ್ತಿರೋದಾಗಿ ತಿಳಿದು ಬಂದಿದೆ.
ಅಂದಹಾಗೇ ವಿಕ್ರಂ ಸಿಂಹ ಶುಂಠಿ ಬೆಳೆಯೋದಕ್ಕೆ ಅರಣ್ಯಕ್ಕೆ ಹೊಂದಿಕೊಂಡಿದ್ದಂತ ಜಮೀನು ಗುತ್ತಿಗೆ ಪಡೆದಿದ್ದರು. ಆದರೆ, ಜಮೀನಿಗೆ ಹೊಂದಿಕೊಂಡಿದ್ದಂತ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ್ದಂತ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿ ಗ್ರಾಮದ ಸರ್ವೇನಂಬರ್ 16ರಲ್ಲಿ ಅಕ್ರಮವಾಗಿ 126 ಮರ ಕಡಿದ ಪ್ರಕರಣ ಸಂಬಂಧ ಈಗಾಗಲೇ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ನಿನ್ನೆಯಷ್ಟೇ ಐಎಫ್‌ಎಸ್ ಅಧಿಕಾರಿಯನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.