ಮಂಗಳೂರು: ಖ್ಯಾತ ಜಾನಪದ ತಜ್ಞ, ಕವಿ, ಕಥೆಗಾರ, ಅಮೃತ ಸೋಮೇಶ್ವರ ಅವರು ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ, ತುಳು ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿ ಖ್ಯಾತಿ ಗಳಿಸಿದ್ದರು.
ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮದ ಅಡ್ಕ ನಿವಾಸಿಯಾಗಿರುವ ಅಮೃತ ಸೋಮೇಶ್ವರ ಅವರು 1935 ಸೆಪ್ಟೆಂಬರ್ 27 ರಂದು ಜನಿಸಿದರು.
ತಮ್ಮ ಬಾಲ್ಯವನ್ನು ಮುಂಬೈಯಲ್ಲಿ ಕಳೆದ ಅಮೃತರು, ಐದು ವರ್ಷವಾಗುವಾಗ ಊರಿಗೆ ಮರಳಿ, ಕೋಟೆಕಾರಿನಲ್ಲಿರುವ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ವರೆಗೆ ಕಲಿತರು. ನಂತರ ಆನಂದಾಶ್ರಮ ಪ್ರೌಢಶಾಲೆಯಲ್ಲಿ 6ನೇ ತರಗತಿಯ ಕಲಿಕೆ ಮುಂದುವರಿಸಿದ ಅವರು 1954ರಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದರು. ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದರು. ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದರು. ಆರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಅನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಕೆಲಸ ಮಾಡಿದರು. ೧೯೬೭ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿ ೧೯೯೩ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳು :
ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕರು, ಅನುವಾದಕರು, ವಿಮರ್ಶಕರು, ಜಾನಪದ ತಜ್ಞ, ಕವಿ, ಕಥೆಗಾರರೂ ಆಗಿದ್ದ ಅಮೃತ ಸೋಮೇಶ್ವರರು, ಹತ್ತಾರು ಪ್ರಸಿದ್ಧ ಯಕ್ಷಗಾನ ಪ್ರಸಂಗಗಳನ್ನೂ, ಕನ್ನಡ, ತುಳು ಭಾಷೆಯಲ್ಲಿ ನೂರಾರು ಸಾಹಿತ್ಯಗಳನ್ನು ರಚಿಸಿದ್ದಾರೆ. ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರಿಗಿದೆ.
ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದರು.
ಅವರ ಮೊದಲ ಕ್ರತಿ ‘ಎಲೆಗಿಳಿ’ ಎಂಬ ಸಣ್ಣಕತೆಗಳ ಸoಕಲನ 1957ರಲ್ಲಿ ಪ್ರಕಟವಾಯಿತು. ರುದ್ರಶಿಲೆ ಸಾಕ್ಷಿ , ಕೆಂಪು ನೆನಪು ಅವರ ಇನ್ನೆರಡು ಸಂಕಲನಗಳು ಪ್ರಕಟವಾದವು. ವನಮಾಲೆ, ಭ್ರಮಣ ಉಪ್ಪು ಗಾಳಿ ಮೊದಲಾದ ಕವನ ಸಂಕಲನ, ತೀರದ ತೆರೆ ಕಾದಂಬರಿ, ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ತುಳುವಿನಲ್ಲಿ ‘ತಂಬಿಲ’, ‘ರಂಗಿತ’ ಕವನ ಸಂಗ್ರಹ, ‘ಗೋಂದೋಲ್’, ‘ರಾಯ ರಾವುತೆ’ ಮೊದಲಾದ ನಾಟಕಗಳನ್ನು ಬರೆದಿದ್ದಾರೆ.
ಪ್ರಶಸ್ತಿಗಳು :
ಮಂಗಳೂರು ವಿಶ್ವ ವಿದ್ಯಾಲಯ ಪ್ರೊಫೆಸರ್ ಅಮೃತ ಸೋಮೇಶ್ವರರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಇದಲ್ಲದೇ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ನೇ ಸಾಲಿನ “ಗೌರವಶ್ರೀ” ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದಿದ್ದಾರೆ.