ಸೊಮಾಲಿಯಾ ಕರಾವಳಿಯ ಬಳಿ ಅಪಹರಣಕ್ಕೊಳಗಾದ ಸರಕು ಹಡಗಿನಲ್ಲಿದ್ದ 15 ಭಾರತೀಯರು ಸೇರಿದಂತೆ ಎಲ್ಲಾ 21 ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ಶುಕ್ರವಾರ ರಕ್ಷಿಸಿದೆ. ಈ ಕುರಿತ ವೀಡಿಯೋವೊಂದನ್ನು ನೌಕಾಪಡೆ ಬಿಡುಗಡೆ ಮಾಡಿದೆ.
ಭಾರತೀಯ ನೌಕಾಪಡೆಯು ಹಂಚಿಕೊಂಡ ವೀಡಿಯೊದಲ್ಲಿ, ರಕ್ಷಿಸಲ್ಪಟ್ಟ ಭಾರತೀಯರು “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು. ಅಪಹರಣಕ್ಕೊಳಗಾದ ಹಡಗಿನಿಂದ ಸುರಕ್ಷಿತವಾಗಿ ರಕ್ಷಿಸಿದ್ದಕ್ಕಾಗಿ ನೌಕಾಪಡೆಗೆ ಧನ್ಯವಾದ ಅರ್ಪಿಸಿದ್ದಾರೆ.
ಗುರುವಾರ ತಡ ರಾತ್ರಿ ಸೋಮಾಲಿಯಾದ ಕಡಲ್ಗಳ್ಳರು ಎಂ. ವಿ. ಲಿಲಾ ನೋರ್‌ಫೋಲ್ಕ್ ಎಂಬ ಹಡಗನ್ನು ಹೈಜಾಕ್ ಮಾಡಿದ್ದರು. ಈ ಹಡಗಿನಲ್ಲಿ ಇದ್ದ 15 ಭಾರತೀಯ ಪ್ರಜೆಗಳೂ ಸೇರಿದಂತೆ ಎಲ್ಲ ಸಿಬ್ಬಂದಿಯನ್ನೂ ಸೋಮಾಲಿಯಾದ ಕಡಲ್ಗಳ್ಳರು ಒತ್ತೆ ಇರಿಸಿಕೊಂಡಿದ್ದರು. ಹಡಗು ಹೈಜಾಕ್ ಆಗಿರುವ ಕುರಿತಾಗಿ ಬ್ರಿಟನ್‌ನ ಸರಕು ಸಾಗಣೆ ಹಡಗುಗಳ ಸಂಘಟನೆಗೆ ವೆಬ್‌ಸೈಟ್ ಪೋರ್ಟಲ್ ಮೂಲಕ ಸಂದೇಶ ರವಾನಿಸಲಾಗಿತ್ತು.
ಗುರುವಾರ ರಾತ್ರಿಯೇ ಅಖಾಡಕ್ಕೆ ಧುಮುಕಿದ ಭಾರತೀಯ ನೌಕಾ ಪಡೆ ಮೊದಲಿಗೆ ನೌಕಾ ಪಡೆಯ ಯುದ್ಧ ವಿಮಾನಗಳನ್ನು ಹಡಗಿನತ್ತ ರವಾನಿಸಿತ್ತು. ಈ ವಿಮಾನವು ಹೈಜಾಕ್ ಆದ ಹಡಗಿನ ಸ್ಥಿತಿಗತಿ ಹಾಗೂ ಸೋಮಾಲಿಯಾ ದೇಶದ ಕಡಲ್ಗಳ್ಳರ ಬಳಿ ಇರಬಹುದಾದ ಶಸ್ತ್ರಾಸ್ತ್ರಗಳ ಕುರಿತಾಗಿ ಹೆಚ್ಚುವರಿ ಮಾಹಿತಿ ಸಂಗ್ರಹಿಸಿತ್ತು. ಬಳಿಕ ಅಪಹರಣಕ್ಕೀಡಾದ ಹಡಗಿನ ಬಳಿ ಯುದ್ದ ನೌಕೆಯನ್ನೂ ರವಾನಿಸಲಾಗಿತ್ತು. ಈ ನೌಕೆಯ ನೆರವಿನಿಂದ ಕಡಲ್ಗಳ್ಳರು ಹಾಗೂ ಹಡಗಿನ ಸಿಬ್ಬಂದಿ ಜೊತೆ ಸಂಪರ್ಕ ಸಾಧಿಸಲಾಯ್ತು. ಈ ನಡುವೆ ಐಎನ್‌ಎಸ್ ಚೆನ್ನೈ ಯುದ್ಧ ನೌಕೆ ಕೂಡಾ ರಕ್ಷಣ ಕಾರ್ಯಾಚರಣೆಗೆ ಹಡಗಿನ ಬಳಿ ಧಾವಿಸಿತ್ತು.
ಶುಕ್ರವಾರ ಬೆಳಗಿನ ವೇಳೆಗೆ ಹೈಜಾಕ್ ಆದ ಹಡಗಿಗೆ ಧುಮುಕಿದ ನೌಕಾ ಪಡೆ ಕಮಾಂಡೋಗಳು, ಹಡಗಿನ ಡೆಕ್ ಸೇರಿದಂತೆ ಸಂಪೂರ್ಣವಾಗಿ ಎಲ್ಲಡೆ ಪರಿಶೀಲನೆ ನಡೆಸಿ ಕಡಲ್ಗಳ್ಳರಿಂದ ಹಡಗನ್ನು ಮುಕ್ತಗೊಳಿಸಿತು.