ವಿಜಯಪುರ : ಭಾರತೀಯ ಪುರಾತತ್ವ ಇಲಾಖೆಯ ಆಧೀನದಲ್ಲಿರುವ ಮ್ಯೂಸಿಯಂಗಳಲ್ಲಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ವಿಚಾರವಾಗಿ ನಗರದ ಗೋಲಗುಂಬಜ್ ಆವರಣದಲ್ಲಿರುವ ಮ್ಯೂಸಿಯಂನಲ್ಲಿ ತಪಾಸನೆ ಮಾಡಲಾಗಿದೆ. ಯಾವುದೇ ಸ್ಪೋಟಕ ಕಂಡು ಬಂದಿಲ್ಲ. ಸಾರ್ವಜನಿಕರು ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರು ಸ್ಪಷ್ಟಪಡಿಸಿದ್ದಾರೆ.
ಇದೊಂದು ಹುಸಿ ಬಾಂಬ್ ಬೆದರಿಕೆ ಆಗಿದ್ದು, ಕಿಡಿಗೇಡಿಗಳು ದೇಶದ ಮ್ಯೂಸಿಯಂಗಳಲ್ಲಿ ಬಾಂಬ್ ಇಟ್ಟಿದ್ದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿದ್ದು ಸುಳ್ಳು ವದಂತಿ. ಮುಂಜಾಗೃತಾ ಕ್ರಮವಾಗಿ ನಗರದ ಗೋಲಗುಂಬಜ್ ಆವರಣದ ಮ್ಯೂಸಿಯಂನಲ್ಲಿ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳ ತಪಾಸನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಿನ್ನೆ ಮೇಲ್ ಮೂಲಕ ಪುರಾತತ್ವ ಇಲಾಖೆ ಅಧೀನದಲ್ಲಿರುವ ಮ್ಯೂಸಿಯಂಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಮೇಲ್ ಹಾಕಿದ್ದರು. morgue999lol ನಿಂದ ಮ್ಯೂಸಿಯಂಗಳಲ್ಲಿ ಬಾಂಬ್ ಇಡಲಾಗಿದೆ ಎಂದು, enquiries@museumofindia.org ಸೇರಿದಂತೆ ನೂರಕ್ಕೂ ಅಧಿಕ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು.
ಶುಕ್ರವಾರ (ಜ.06) ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಮ್ಯೂಸಿಯಂನಲ್ಲಿ ಹಲವು ಸ್ಪೋಟಕಗಳನ್ನ ಬಚ್ಚಿಡಲಾಗಿದೆ. ಬೆಳಗ್ಗೆ ಎಲ್ಲವೂ ಸ್ಪೋಟಗೊಳ್ಳುತ್ತವೆ ಎಂದು‘Morgue999lol’ ಎಂಬ ಐಡಿ ಮೂಲಕ ಮೇಲ್ ಮಾಡಿ, ಜೊತೆಗೆ ಉಗ್ರ ಸಂಘಟನೆಯೊಂದರ (Terrorizers 111) ಹೆಸರನ್ನು ದುಷ್ಕರ್ಮಿಗಳು ಉಲ್ಲೇಖಿಸಿ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಮ್ಯೂಸಿಯಂ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಂದು ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದಲೂ ಪರಿಶೀಲನೆ ನಡೆಸಲಾಗಿತ್ತು. ಪರಿಶೀಲನೆ ಬಳಿಕ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ಪತ್ತೆಯಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.