ಮಾಲೆ: ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡುವ ಮೂಲಕ ಭಾರಿ ವಿವಾದ ಹುಟ್ಟು ಹಾಕಿದ್ದ ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಭಾನುವಾರ ಅಮಾನತು ಮಾಡಿದೆ.
ಸರ್ಕಾರಿ ಹುದ್ದೆಗಳಲ್ಲಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅಂತಹ ಪೋಸ್ಟ್‌ಗಳನ್ನು ಮಾಡಿದವರನ್ನು ಅವರ ಕರ್ತವ್ಯಗಳಿಂದ ಅಮಾನತು ಮಾಡಲಾಗಿದೆ ಎಂದು ಅಮಾನತುಗೊಂಡವರ ಹೆಸರು ಬಹಿರಂಗಪಡಿಸದೆ ಸರ್ಕಾರದ ಹೇಳಿಕೆಯಲ್ಲಿ ತಿಳಿಸಿದೆ.
ಮೋದಿ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಬೆನ್ನಲ್ಲೇ ಕೋಟ್ಯಂತರ ಭಾರತೀಯರು ಬಾಯ್ಕಾಟ್ ಮಾಲ್ಡೀವ್ಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿ ಹಲವು ಸೆಲೆಬ್ರಿಟಿಗಳು ಮಾಲ್ಡೀವ್ಸ್ ಸಚಿವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದರ ಬೆನ್ನಲ್ಲೇ ಕೆಲವರ ವೈಯಕ್ತಿಕ ಅಭಿಪ್ರಾಯಗಳಷ್ಟೇ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಅವರು ಪ್ರತಿನಿಧಿಸುವುದಿಲ್ಲ ಎಂದು ಮಾಲೆ ಭಾನುವಾರ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ.
ಯುವ ಜನ ಸಬಲೀಕರಣ ಉಪ ಸಚಿವೆ ಮರಿಯಮ್ ಶಿಯುನಾ, ಸಾರಿಗೆ ಮತ್ತು ನಾಗರಿಕ ಉಪ ಸಚಿವ ಹಸನ್ ಜಿಹಾನ್ ಹಾಗೂ ಮಾಲ್ಶಾ ಷರೀಫ್ ಅವರನ್ನು ಹುದ್ದೆಗಳಿಂದ ಅಮಾನತು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಲಕ್ಷದ್ವೀಪಕ್ಕೆ ತಮ್ಮ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯರು ತಮ್ಮ ಪ್ರವಾಸಿ ತಾಣವನ್ನಾಗಿ ದ್ವೀಪವನ್ನು ಆಯ್ಕೆ ಮಾಡುಕೊಳ್ಳುವಂತೆ ಪ್ರಚಾರ ಮಾಡಿದ್ದರು. ಇದರ ಬಳಿಕ ಶಿಯುನಾ ಅವರು ಪ್ರಧಾನಿ ಮೋದಿ ಅವರನ್ನು ‘ವಿದೂಷಕ’ ಮತ್ತು ‘ಕೈಗೊಂಬೆ’ ಎಂದು ವ್ಯಂಗ್ಯವಾಡಿದ್ದರು. ಈ ಟ್ವೀಟ್‌ಗಳು ಭಾರಿ ಆಕ್ರೋಶಕ್ಕೆ ಒಳಗಾಗುತ್ತಿದ್ದಂತೆಯೇ ಎಕ್ಸ್ ಜಾಲತಾಣದಿಂದ ತೆಗೆದು ಹಾಕಿದ್ದರು.