ಗದಗ: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಊರಿನ ಬೀದಿಯಲ್ಲಿ ಕಟೌಟ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ಘೋರ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಮುರಳಿ ನಡವಿನಮನಿ (20), ಹನಮಂತ ಹರಿಜನ್ (21), ಹಾಗೂ ನವೀನ್ ಗಾಜಿ(19) ಸಾವನ್ನಪ್ಪಿದ ಯುವಕರು.
ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಲು ಇವರೆಲ್ಲರೂ ಯೋಜಿಸಿದ್ದರು ಎನ್ನಲಾಗಿದೆ.
ಈ ವೇಳೆ ಯಶ್ ಫೋಟೋವುಳ್ಳ ಬೃಹತ್ ಬ್ಯಾನರ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದೆ.
ಸಾಮೂಹಿಕ ಅಂತ್ಯಸಂಸ್ಕಾರ: ಯುವಕರ ಅಂತಿಮ ಸಂಸ್ಕಾರದಲ್ಲಿ ಇಡೀ ಸೂರಣಗಿ ಗ್ರಾಮವಲ್ಲದೆ ಸುತ್ತಮುತ್ತಲಿನ ಊರುಗಳ ಮಂದಿಯೂ ಆಗಮಿಸಿದ್ದರು. ವಿದ್ಯುತ್ ಪ್ರವಹಿಸಿ ಸಾವಿಗೀಡಾದ ಹಣಮಂತ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ್ ಅವರ ಅಂತ್ಯಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.
ತಲಾ 2 ಲಕ್ಷ ಪರಿಹಾರ :
ಮೃತ ಯುವಕರ ಕುಟುಂಬದವರು ಬಡವರಾಗಿದ್ದು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಅವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಯಶ್ ಭೇಟಿ :
ಸಂಜೆ 4 ಗಂಟೆಗೆ ನಟ ಯಶ್ ಭೇಟಿ ನೀಡಲಿದ್ದಾರೆ. ಇನ್ನು ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅವರನ್ನು ನಟ ಭೇಟಿಯಾಗಿ ಆರೋಗ್ಯ ವಿಚಾರಿಸುವ ಸಾಧ್ಯತೆಯಿದೆ.