ಚಂಡೀಗಢ: ಗುರುಗ್ರಾಮ್ನ ಹೋಟೆಲ್ವೊಂದರಲ್ಲಿ ಹತ್ಯೆಗೀಡಾದ ಮಾಜಿ ಮಾಡೆಲ್ ದಿವ್ಯಾ ಪಹುಜಾ ಅವರ ಮೃತದೇಹ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಕಾಲುವೆಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ತೋಹಾನಾದಲ್ಲಿರುವ ಭಾಕ್ರಾ ಕಾಲುವೆಯ ಉಪ ಕಾಲುವೆಯಿಂದ ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುರುಗ್ರಾಮ್ ಸಹಾಯಕ ಪೊಲೀಸ್ ಆಯುಕ್ತ(ಅಪರಾಧ) ವರುಣ್ ಕುಮಾರ್ ದಹಿಯಾ ಅವರು ಹೇಳಿದ್ದಾರೆ.
ಜನವರಿ 2 ರಂದು ಗುರುಗ್ರಾಮ್ನ ಹೋಟೆಲ್ ಕೊಠಡಿಯಲ್ಲಿ 27 ವರ್ಷದ ದಿವ್ಯಾ ಪಹುಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪೋಲೀಸರ ಪ್ರಕಾರ, ಮಾಜಿ ಮಾಡೆಲ್ “ಅಶ್ಲೀಲ ಚಿತ್ರಗಳನ್ನು” ಇಟ್ಟುಕೊಂಡು ಹೋಟೆಲ್ ಮಾಲೀಕರಿಗೆ ಬ್ಲ್ಯಾಕ್ಮೇಲ್ ಮಾಡುವ ಮೂಲಕ ಹಣ ವಸೂಲಿ ಮಾಡುತ್ತಿದ್ದಳು ಎಂಬ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ.
ದಿವ್ಯಾ ಪಹುಜಾ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಬಾಲರಾಜ್ ಗಿಲ್ ಎಂಬಾತನನ್ನು ಗುರುವಾರ (ಜನವರಿ 11) ಗುರುಗ್ರಾಮ್ ಪೊಲೀಸರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಗಿಲ್ ತನ್ನ ಕಾರನ್ನು ಬಸ್ ನಿಲ್ದಾಣದ ಬಳಿ ನಿಲ್ಲಿಸಿ ಪಂಜಾಬ್ನ ಪಟಿಯಾಲಾದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮೊದಲೇ ಮಾಹಿತಿ ಪಡೆದಿದ್ದರು. ಮತ್ತೋರ್ವ ಆರೋಪಿ ರವಿ ಬಂಗಾ ಇನ್ನೂ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.