ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಮೂರು ತಿಂಗಳ ಸುದೀರ್ಘ ಎಎಸ್‌ಐ ವರದಿಯನ್ನು ಸಾರ್ವಜನಿಕಗೊಳಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.
ಸಮೀಕ್ಷಾ ವರದಿಯ ಪ್ರತಿಯನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರಿಗೂ ನೀಡಲಾಗುವುದು ಎಂದು ಹೇಳಲಾಗಿದೆ.
ಎಎಸ್‌ಐ ಡಿಸೆಂಬರ್ 18ರಂದು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿತ್ತು. ಅದೇ ಸಮಯದಲ್ಲಿ ವರದಿಯನ್ನು ನೀಡುವಂತೆ ಹಿಂದೂ ಕಡೆಯವರು ಒತ್ತಾಯಿಸಿದ್ದರು. ಆದರೆ, ಮುಸ್ಲಿಂ ಕಡೆಯವರು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಬಹಿರಂಗಪಡಿಸಲು ಸಾಧ್ಯವಾಗಿರಲಿಲ್ಲ.
ವರದಿ ನೀಡಲು ನ್ಯಾಯಾಲಯ ಮೌಖಿಕ ಆದೇಶ ನೀಡಿದೆ ಎಂದು ಹಿಂದೂ ಪರ ವಕೀಲರು ಹೇಳುತ್ತಾರೆ. ಲಿಖಿತ ಆದೇಶವೂ ಶೀಘ್ರದಲ್ಲೇ ಬರಲಿದೆ. ಇದರ ನಂತರ, ವರದಿಯ ಪ್ರತಿಗಾಗಿ ಅರ್ಜಿಯನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಯಾದ ಬಳಿಕ ನಾಳೆಯೊಳಗೆ ಎರಡೂ ಕಡೆಯವರಿಗೂ ವರದಿ ಸಿಗಲಿದೆ ಎಂಬ ನಂಬಿಕೆ ಇದೆ. ವರದಿಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಒಮ್ಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಹಿಂದೂ ಪರ ವಕೀಲ ವಿಷ್ಣು ಜೈನ್ ಪ್ರಕಾರ, ಎರಡೂ ಕಕ್ಷಿದಾರರಿಗೆ ಹಾರ್ಡ್ ಕಾಪಿಗಳನ್ನು ನೀಡಲಾಗುವುದು. ವರದಿಯನ್ನು ಬಹಿರಂಗಗೊಳಿಸುವಂತೆ ಹಿಂದೂಗಳ ಕಡೆಯವರು ಒತ್ತಾಯಿಸಿದ್ದರು ಎಂದರು.
ಬುಧವಾರದಂದು ಎಎಸ್‌ಐ ಕೂಡ ಇಲ್ಲಿನ ತ್ವರಿತ ನ್ಯಾಯಾಲಯಕ್ಕೆ ಸಮೀಕ್ಷಾ ವರದಿ ಸಲ್ಲಿಸಿತ್ತು. 1991ರಿಂದ ಇಲ್ಲಿ ಜ್ಞಾನವಾಪಿ ಮೂಲ ವಿವಾದ ನಡೆಯುತ್ತಿದೆ. ಡಿಸೆಂಬರ್ 18 ರಂದು ಸುಮಾರು ಎರಡು ಸಾವಿರ ಪುಟಗಳ ಈ ವರದಿಯನ್ನು ನಾಲ್ಕು ಭಾಗಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ಎಎಸ್ ಐ ನ್ಯಾಯಾಲಯಕ್ಕೆ ಸಲ್ಲಿಸಿತ್ತು.