ಪಾಕಿಸ್ತಾನದ ಮಾಜಿ ನಾಯಕ ಮತ್ತು ಆಲ್ರೌಂಡರ್ ಶೋಯೆಬ್ ಮಲಿಕ್ ಕೆಲವು ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಂದ ವಿಚ್ಛೇದನ ಪಡೆದು ಮೂರನೇ ಮದುವೆಯಾಗುವ ಮೂಲಕ ಶೋಯೆಬ್ ಮಲಿಕ್ ಎಲ್ಲೆಡೆ ಸುದ್ದಿಯಾಗಿದ್ದರು.
ಮೂರನೇ ಮದುವೆಯ ಬಳಿಕ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಶೋಯೆಬ್ ಕಾಣಿಸಿಕೊಳ್ಳುತ್ತಿದ್ದರು. ಆದರೆ ಲೀಗ್ನಲ್ಲಿ ಫಾರ್ಚೂನ್ ಬಾರಿಶಾಲ್ ತಂಡದ ಪರ ಕಣಕ್ಕಿಳಿಯುತ್ತಿರುವ ಶೋಯೆಬ್ ಮಲಿಕ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಅವರನ್ನು ತಂಡದಿಂದ ಹೊರಹಾಕಲಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನ ಫ್ರಾಂಚೈಸ್ ಫಾರ್ಚೂನ್ ಬಾರಿಶಾಲ್, ಫಿಕ್ಸಿಂಗ್ ಆರೋಪ ಕೇಳಿಬಂದ ನಂತರ ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು ಸೀಸನ್ ಮಧ್ಯದಲ್ಲಿ ಕೊನೆಗೊಳಿಸಿದೆ. ಹಾಗೆಯೇ ಮಲಿಕ್ ರನ್ನು ತಂಡದಿಂದ ಹೊರಹಾಕಲಾಗಿದ್ದು ಅವರು ಇದ್ದಕ್ಕಿದ್ದಂತೆ ಪಂದ್ಯಾವಳಿಯನ್ನು ಮಧ್ಯದಲ್ಲಿ ತೊರೆದು ದುಬೈಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಒಂದೇ ಓವರ್ – 3 ನೋ ಬಾಲ್
ವಾಸ್ತವವಾಗಿ ಜನವರಿ 22 ರಂದು ಬಾರಿಶಾಲ್ ಮತ್ತು ಖುಲ್ನಾ ಟೈಗರ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಬಾರಿಶಾಲ್ ಪರ ಬೌಲಿಂಗ್ ದಾಳಿಗಿಳಿದ್ದ ಮಲಿಕ್ ಕೇವಲ ಒಂದು ಓವರ್ ಬೌಲ್ ಮಾಡಿ 18 ರನ್ ನೀಡಿದ್ದರು.
ಆದರೆ ಈ ಓವರ್ ನಲ್ಲೇ ಮಲಿಕ್ ಬರೋಬ್ಬರಿ 3 ನೋ ಬಾಲ್ಗಳನ್ನು ಎಸೆದು ಎಲ್ಲರನ್ನು ಅಚ್ಚರಿಗೊಳಿಸಿದ್ದರು.
ವೇಗದ ಬೌಲರ್ ಗಳು ಒಂದು ಓವರ್ನಲ್ಲಿ ಮೂರು ನೋ ಬಾಲ್ ಎಸೆಯುವುದು ಅಪರೂಪವಾಗಿರುವಾಗ ಸ್ಪಿನ್ ಬೌಲರ್ ಆಗಿರುವ ಮಲಿಕ್ ಒಂದೇ ಓವರ್ನಲ್ಲಿ ಮೂರು ನೋ-ಬಾಲ್ಗಳನ್ನು ಮಾಡಿದ್ದರು. ಹೀಗಾಗಿ ಮಲಿಕ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಾನಿಯಾ ಮಿರ್ಜಾ ಜೊತೆ ಬ್ರೇಕಪ್
ಇತ್ತೀಚೆಗಷ್ಟೇ ಶೋಯೆಬ್ ಮಲಿಕ್ ಮೂರನೇ ಮದುವೆಯ ಮೂಲಕ ಸುದ್ದಿಯಾಗಿದ್ದರು. ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.
ಈ ಮೂಲಕ ಶೋಯೆಬ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಡುವಿನ 13 ವರ್ಷಗಳ ಸುದೀರ್ಘ ಸಂಬಂಧಕ್ಕೆ ಅಂತ್ಯ ಹಾಡಿದ್ದಾರು.