ಭುಬನೇಶ್ವರ್: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಡುವೆ ರಾಜಕೀಯ ರಂಗದಲ್ಲಿ ಬದಲಾವಣೆಗಳು ಉಂಟಾಗುತ್ತಿವೆ. ಈಗಾಗಲೇ ‘ಇಂಡಿಯಾ’ ಮೈತ್ರಿ ಕೂಟ ಒಡೆದಿದೆ. ಗೆಲುವಿಗಾಗಿ ಹೊರಾಡುತ್ತಿರುವ ಕಾಂಗ್ರೆಸ್ ಇದೀಗ ಮತ್ತೆ ತನ್ನ ಹಳೇ ಡೈಲಾಗ್ ಹೊಡೆಯಲು ಶುರುವಿಟ್ಟಿದೆ.
ಹೌದು, ಒಡಿಶಾದ ಭುಬನೇಶ್ವರದಲ್ಲಿನ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಬಾರಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಇದುವೇ ನನ್ನ ಕೊನೆಯ ಚುನಾವಣೆ. ಮೋದಿ ಅಧಿಕಾರ ಮುಂದುವರಿದರೆ, ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಘೋಷಿಸಿದ್ದಾರೆ.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲ. ಚುನಾವಣೆ ಇಲ್ಲವೇ ಇಲ್ಲ. ಮೋದಿ ಸರ್ವಾಧಿಕಾರ ಪ್ರಾಬಲ್ಯ ಹೆಚ್ಚಾಗಲಿದೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕಾರಣದಿಂದ ನಿವೃತ್ತಿಪಡೆಯುತ್ತೇನೆ ಎಂದ ಅವರು, ಮೋದಿಯಿಂದ ದೇಶವೇ ಸರ್ವನಾಶವಾಗಲಿದೆ ಎಂದಿದ್ದಾರೆ.
ಇಡಿಗೆ ಹೆದರಿ ಬಿಜೆಪಿ ಸೇರ್ಪಡೆ :
ಕೇಂದ್ರ ಬಿಜೆಪಿ ಸರ್ಕಾರ ಇಡಿ ಬಳಸಿ ಎಲ್ಲರಿಗೂ ನೋಟಿಸ್ ನೀಡುತ್ತಿದೆ. ಇಡಿಗೆ ಹೆದರಿ ಹಲವು ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಪಕ್ಷಗಳನ್ನೇ ಬೆದರಿಸುತ್ತಿದ್ದಾರೆ. ಇದರಿಂದ ಇಂಡಿಯಾ ಒಕ್ಕೂಟದಿಂದ ಕೆಲ ಪಕ್ಷಗಳು ಬಿಜೆಪಿ ಜೊತೆ ಸೇರಿಕೊಳ್ಳುತ್ತಿದೆ. ಕೆಲ ಪಕ್ಷಗಳು ಮೈತ್ರಿಯಿಂದ ದೂರ ಉಳಿಯುತ್ತಿದೆ. ದೇಶದ ನಾಗರೀಕರಿಗೆ ಇದು ಕೊನೆಯ ಅವಕಾಶ. ಈ ಚುನಾವಣೆಯಲ್ಲಿ ನೀವು ಬಿಜೆಪಿ ವಿರುದ್ಧ ಮತ ಚಲಾಯಿಸಿದರೆ ದೇಶ ಉಳಿಯಲಿದೆ. ಇಲ್ಲದಿದ್ದರೆ ಮುಂದೆ ನಿಮಗೆ ಮತ ಚಲಾಯಿಸುವ ಅವಕಾಶವೂ ಇರವುದಿಲ್ಲ. ಬಿಜೆಪಿ ತನ್ನ ಸರ್ವಾಧಿಕಾರದಿಂದ ಎಲ್ಲಾ ಅವಕಾಶಗಳನ್ನು ಕಸಿದುಕೊಳ್ಳಲಿದೆ ಎಂದು ಖರ್ಗೆ ಎಚ್ಚರಿಸಿದ್ದಾರೆ.
ಮೋದಿ ಗೆದ್ದರೆ ಭಾರತದ ಕತೆ ಮುಗೀತು:
2024ರ ಲೋಕಸಭಾ ಚುನಾವಣೆ ದೇಶದ ಮತದಾರರಿಗೆ ಕೊನೆಯ ಚುನಾವಣೆ. ಈ ಚುನಾವಣೆಯಲ್ಲಿ ಮತ್ತೆ ಮೋದಿಯನ್ನು ಗೆಲ್ಲಿಸಿದರೆ, ಭಾರತದ ಕತೆ ಮುಗೀತು ಎಂದ ಅವರು, ಮೊಹಬ್ಬತ್ ಕಿ ದುಕಾನ್ ಮೂಲಕ ರಾಹುಲ್ ಗಾಂಧಿ ದೇಶವನ್ನೂ ಒಗ್ಗೂಡಿಸುತ್ತಿದ್ದಾರೆ. ಆದರೆ ಬಿಜೆಪಿ ಹಾಗೂ ಆರ್‌ಎಸ್ಎಸ್ ಭಾರತವನ್ನು ಒಡೆದು ಆಳುತ್ತಿದೆ ಎಂದಿದ್ದಾರೆ.