ಚಿಕ್ಕಮಗಳೂರು : ಇತ್ತೀಚಿಗೆ ಮದುವೆಗಳು, ಆಮಂತ್ರಣ ಪತ್ರಿಕೆಗಳು ವಿಭಿನ್ನವಾಗಿರೋದನ್ನು ಕಾಣುತ್ತೇವೆ. ಮದುವೆಯ ಅಬ್ಬರ, ಆಮಂತ್ರಣ ಪತ್ರಿಕೆಯಲ್ಲಿ ಅದ್ದೂರಿತನವೂ ಇರುತ್ತದೆ.
ಆಮಂತ್ರಣ ಪತ್ರಿಕೆಯಲ್ಲಿ ವಿಭಿನ್ನ ಬರಹಗಳನ್ನೂ ಕಾಣುತ್ತೇವೆ.
ಅಲ್ಲದೇ, ಸಾಮಾನ್ಯವಾಗಿ ಮದುವೆಯಲ್ಲಿ ಆಶೀರ್ವಾದವೇ ಉಡುಗೊರೆ, ನಿಮ್ಮ ಸಂತಸದ ಆಗಮನವೇ ಸಂಭ್ರಮ ಉಡುಗೊರೆ ಎಂದೆಲ್ಲಾ ಬರೆದಿರುವುದನ್ನು ಕಾಣಬಹುದು. ಆದರೆ ಇಲ್ಲೊಬ್ಬರು ಲೋಕಸಭಾ ಚುನಾವಣೆ ಪ್ರಚಾರ ಮಾಡಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿಭಿನ್ನವಾದ ಮದುವೆಯ ಆಮಂತ್ರಣ ಪತ್ರಿಕೆಯೊಂದು ಸಖತ್ ವೈರಲ್ ಆಗುತ್ತಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವಧುವಿನ ಅಣ್ಣನಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗಳ ಮೇಲಿರುವ ಪ್ರೀತಿ ಹಾಗೂ ಬಿಜೆಪಿ ಪಕ್ಷದ ಮೇಲಿರುವ ನಿಯತ್ತು ಪ್ರದರ್ಶನವಾಗಿದ್ದು, ಬಿಜೆಪಿ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿ ಮದುವೆಯ ಆಮಂತ್ರಣ ಪತ್ರಿಕೆ ಫೋಟೋವನ್ನು ವೈರಲ್ ಆಗುತ್ತಿದೆ.
ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಶಿ ಆಲ್ದೂರು ಎನ್ನುವವರು ತನ್ನ ತಂಗಿ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಪ್ರಚಾರ ಮಾಡಿದ್ದಾರೆ.
ಮದುವೆಯಲ್ಲಿ ವಧು ವರರಿಗೆ ಉಡುಗೊರೆ ನೀಡುವುದು ಬೇಡ ಎಂದಿರುವ ಶಶಿ ಆಲ್ದೂರು,” ವಧು-ವರರಿಗೆ ಉಡುಗೊರೆ ನೀಡಬೇಕೆಂದಿದ್ದರೆ, ತಾವು ಖಂಡಿತವಾಗಿಯೂ ಈ ಬಾರಿ ನರೇಂದ್ರ ಮೋದಿ ಅವರಿಗೆ ಮತ ನೀಡಿ. ಯಾಕೆಂದರೆ ಅವರ ಮಕ್ಕಳ ಭವಿಷ್ಯದ ಭಾರತ ಸುಭದ್ರವಾಗಿರಬೇಕು” ಎಂದು ಮದುವೆ ಆಮಂತ್ರಣದಲ್ಲಿ ಮುದ್ರಿಸಿದ್ದಾರೆ. ಜೊತೆಗೆ ಮೋದಿ ಫೋಟೋವೂ ಇದೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಶಿ ಆಲ್ದೂರು ಅವರ ತಂಗಿ ವಕೀಲೆ ಸಹನಾ ಹಾಗೂ ಮೈಸೂರಿನ ಹುಣಸೂರಿನ ಸಚಿನ್ ಮದುವೆ ವಿವಾಹ ಫೆಬ್ರವರಿ 5ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿದೆ.