ಬೆಂಗಳೂರು : ಕೇಂದ್ರ ಸರ್ಕಾರದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಹೀಗೆ ಅನ್ಯಾಯ ಆದ್ರೆ, ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಹೇಳಬೇಕಾಗುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಇಂದು ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಡಿಕೆ ಸುರೇಶ್ ಅವರು, ದಕ್ಷಿಣ ಭಾರತದ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯವಾಗುತ್ತಿದೆ ಎಂದರು.
ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ. ಹೀಗಾಗಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾಗುತ್ತದೆ ಮತ್ತು ಮುಂದೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಲಿವೆ ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.
ಪ್ರತ್ಯೇಕ ರಾಷ್ಟ್ರದ ಕೂಗು ಏಳುವ ಮುನ್ನವೇ ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು. ದಕ್ಷಿಣ ಭಾರತದ ತೆರಿಗೆ ಹಣವನ್ನು ದಕ್ಷಿಣ ಭಾರತಕ್ಕೇ ಖರ್ಚು ಮಾಡಬೇಕು. ನಮ್ಮ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡಬಾರದು ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಹೊಸ ಪದಗಳನ್ನು ಬಳಸಿ, ಹೊಸ ಹೆಸರಿಟ್ಟು ಒಂದಷ್ಟು ಯೋಜನೆ ಘೋಷಿಸಿದ್ದಾರೆ. ನಮಗೆ ಬರಬೇಕಾದ ಹಣವೇ ಸರಿಯಾಗಿ ಬರುತ್ತಿಲ್ಲ. ಇನ್ನೂ 75,000 ಕೋಟಿ ಬಡ್ಡಿ ರಹಿತ ಸಾಲ ಕೊಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.