ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ ನಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಎನ್‌ಡಿಎ ಸರ್ಕಾರದ ಕೊನೆಯ ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಕೊನೆಯ ಭಾಷಣ ಮಾಡಿದರು.
ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಭಾರತದ ಸಾಧನೆಗಳನ್ನು ಕಿತ್ತು ಹಾಕುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷವು ಕ್ಯಾನ್ಸಲ್ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ. ಮೇಕ್ ಇನ್ ಇಂಡಿಯಾ ಎಂದು ಹೇಳಿದರೆ, ಅವರು ಕ್ಯಾನ್ಸಲ್ ಎಂದು ಹೇಳುತ್ತಾರೆ, ನಾವು ಆತ್ಮನಿರ್ಭರ ಭಾರತ್, ಅವರು ಕ್ಯಾನ್ಸಲ್ ಎಂದು ಹೇಳುತ್ತಾರೆ ಎಂದು ಮೋದಿ ಟಾಂಗ್ ಕೊಟ್ಟರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದೇ 370 ಸ್ಥಾನಗಳನ್ನು ಪಡೆಯಲಿದೆ. ಜೊತೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ 400ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ, ದೇಶಕ್ಕೆ ಉತ್ತಮ ವಿರೋಧ ಪಕ್ಷದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಪ್ರತಿಪಕ್ಷಗಳ ಇಂದಿನ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ದೂಷಿಸಿದರು.
ವಿರೋಧ ಪಕ್ಷಗಳು ವಿರೋಧ ಪಕ್ಷವಾಗಿಯೇ ಉಳಿಯಲಿವೆ
ಕಾಂಗ್ರೆಸ್ ಪಕ್ಷಕ್ಕೆ ಅತ್ಯುತ್ತಮ ವಿಪಕ್ಷವಾಗುವ ಅವಕಾಶ ಸಿಕ್ಕಿತ್ತು. ಆದ್ರೆ ಕಳೆದ 10 ವರ್ಷ ಕಳೆದರೂ ಒಳ್ಳೆಯ ವಿಪಕ್ಷವಾಗಲಿಲ್ಲ. ಬೇರೆಯವರಿಗೂ ನಾಯಕತ್ವ ಬಿಟ್ಟುಕೊಡಲಿಲ್ಲ ಎಂದರು.
ನಾವು ವೋಕಲ್ ಫಾರ್ ಲೋಕಲ್ ಎಂದು ಹೇಳುತ್ತೇವೆ ಅವರು, ಅದಕ್ಕೂ ಕ್ಯಾನ್ಸಲ್ ಎಂದು ಹೇಳುತ್ತಾರೆ. ನಾವು ವಂದೇ ‘ವಂದೇ ಭಾರತ್ ಎಂದರೂ ಅವರು ಅದರನ್ನೂ ತಿರಸ್ಕರಿಸುತ್ತಾರೆ. ನಾವು ‘ಸೆಂಟ್ರಲ್ ವಿಸ್ತಾ’ ಎಂದು ಹೇಳುತ್ತೇವೆ, ಅವರು ‘ರದ್ದು ಮಾಡಿ’ ಎಂದು ಹೇಳುತ್ತಾರೆ ಎಂದು ಪ್ರಧಾನಿ ಟೀಕಿಸಿದರು.
ಇನ್ನು ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನೇ ಕಳೆದುಕೊಂಡಿವೆ ಎಂದು ಮೋದಿ ಕುಟುಕಿದರು. ಈ ಬಾರಿಯೂ ಸೇರಿದಂತೆ ದೀರ್ಘಕಾಲದವರೆಗೆ ವಿರೋಧ ಪಕ್ಷಗಳು ವಿರೋಧ ಪಕ್ಷದ ಸ್ಥಾನದಲ್ಲಿಯೇ ಉಳಿಯಲಿವೆ ಎಂಬುದು ತಮಗೆ ಮನವರಿಕೆಯಾಗಿದೆ ಎಂದರು.
ಅತಿ ದೊಡ್ಡ ಆರ್ಥಿಕತೆ :
ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತ ದೇಶವು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರ ಆಗಲಿದೆ ಎಂದ ಅವರು, ತಮ್ಮ 10 ವರ್ಷಗಳ ಕಾರ್ಯಾವಧಿಯಲ್ಲಿ ಭಾರತ ವಿಶ್ವದಲ್ಲೇ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿದೆ. ಆದರೆ, 2014ರಲ್ಲಿ ವಿಶ್ವದಲ್ಲೇ 11ನೇ ಸ್ಥಾನದಲ್ಲಿ ಇತ್ತು ಎಂದರು.
ಭಾರತ ದೇಶದ ಪ್ರಗತಿಯನ್ನು ಜಿ – 20 ಸದಸ್ಯ ರಾಷ್ಟ್ರಗಳೇ ಕೊಂಡಾಡುತ್ತಿವೆ ಎಂದರು. ದೇಶ ಇಷ್ಟು ದೊಡ್ಡ ಮಟ್ಟದ ಅಭಿವೃದ್ದಿ ಸಾಧಿಸುತ್ತೆ ಎಂಬ ಕಲ್ಪನೆಯೇ ಕಾಂಗ್ರೆಸ್‌ಗೆ ಇರಲಿಲ್ಲ. ನಾಲ್ಕು ತಲೆಮಾರು ಕಳೆದರೂ ಕಾಂಗ್ರೆಸ್ ಆಡಳಿತದಲ್ಲಿ ದೇಶದ ಅಭಿವೃದ್ಧಿ ಈ ಮಟ್ಟಕ್ಕೆ ತಲುಪಲು ಆಗುತ್ತಿರಲಿಲ್ಲ ಎಂದರು.
ನಾವು ಬಡವರಿಗೆ 4 ಕೋಟಿ ಮನೆ ಕಟ್ಟಿದ್ದೇವೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ, ಉಜ್ವಲಾ ಗ್ಯಾಸ್ ಸಿಲಿಂಡರ್ ವಿತರಣೆ ಯೋಜನೆ ಸೇರಿದಂತೆ ಹಲವು ಯೋಜನೆಗಳು ಕಾಂಗ್ರೆಸ್ ಕಾಲದಲ್ಲಿ ಜಾರಿಯಾಗಲು ಹಲವು ತಲೆಮಾರುಗಳೇ ಬೇಕಾಗುತ್ತಿದ್ದವು ಎಂದು ಲೇವಡಿ ಮಾಡಿದರು.
INDIA ಮೈತ್ರಿಕೂಟದ ಬಗ್ಗೆ ವ್ಯಂಗ್ಯ
ವಿರೋಧ ಪಕ್ಷಗಳ INDIA ಮೈತ್ರಿ ಕೂಟದಲ್ಲಿ ಒಂದು ಪಕ್ಷದ ಬಗ್ಗೆ ಮತ್ತೊಂದು ಪಕ್ಷಕ್ಕೆ ವಿಶ್ವಾಸ ಇಲ್ಲ. ಹೀಗಿರುವಾಗ ದೇಶದ ಜನರ ಮೇಲೆ ಹೇಗೆ ನಂಬಿಕೆ ಇರುತ್ತೆ ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಮೊದಲ ಅವಧಿಯಲ್ಲಿ ಯುಪಿಎ ತೋಡಿದ್ದ ಗುಂಡಿಗಳನ್ನೇ ಮುಚ್ಚಿದೆವು. ಎರಡನೇ ಅವಧಿಯಲ್ಲಿ ನವ ಭಾರತಕ್ಕೆ ಬುನಾದಿ ಹಾಕಿದ್ದೇವೆ. ಮೂರನೇ ಅವಧಿಯಲ್ಲಿ ಅಭಿವೃದ್ದಿ ಹೊಂದಿದ ಭಾರತ ನಿರ್ಮಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.