ಶಿವಮೊಗ್ಗ : ಮೀನು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಕಾಪಾಡಿದ್ದಾರೆ.
ಹೊನ್ನಾಳಿ ತಾಲ್ಲೂಕು ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್ ಮತ್ತು ರೋಜಾ ದಂಪತಿಯ 11 ತಿಂಗಳ ಮಗು ಪ್ರತೀಕ್ ಮನೆಯೊಳಗೆ ಆಟವಾಡುತ್ತಿದ್ದಾಗ ಮೀನನ್ನು ನುಂಗಿ ಬಿಟ್ಟಿದೆ. ಇದನ್ನು ಗಮನಿಸಿದ ಪೋಷಕರು ತಕ್ಷಣವೇ ಮೀನನ್ನು ಹೊರ ತೆಗೆಯಲು ಪ್ರಯತ್ನ ನಡೆಸಿದ್ದರಾದರೂ ಯಶಸ್ವಿ ಆಗಿರಲಿಲ್ಲ. ಅಷ್ಟೊತ್ತಿಗಾಗಲೇ ಮಗು ಸ್ಥಿತಿ ಗಂಭೀರವಾಗಿತ್ತು. ಬಳಿಕ ಪೋಷಕರು ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದರು.
ಕೂಡಲೇ ತಪಾಸಣೆ ನಡೆಸಿದ ತಜ್ಞ ವೈದ್ಯರು ತೀವ್ರ ನಿಗಾಘಟಕದಲ್ಲಿರಿಸಿ, ಗಂಟಲಲ್ಲಿ ಸಿಕ್ಕಿಕೊಂಡಿದ್ದ 11.3 ಸೆಂ.ಮೀ. ಉದ್ದದ ಮೀನನ್ನು ಹೊರ ತೆಗೆದು ಮಗುವಿನ ಜೀವವನ್ನು ಉಳಿಸಿದ್ದಾರೆ.
ಇದೊಂದು ಅಪರೂಪದ ಪ್ರಕರಣವಾಗಿದ್ದು, ಮಕ್ಕಳ ತಜ್ಞ ವೈದ್ಯ ಡಾ.ಪ್ರದೀಪ್ ಚಿಕಿತ್ಸೆ ನೀಡುವ ಮೂಲಕ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.