ಮಂಗಳೂರು : ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ರಾಜಕೀಯ ಪಕ್ಷಗಳ ಚಟುವಟಿಕೆಗಳು ಚುರುಕಾಗಿದೆ.
ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ಕೇಂದ್ರ ನಾಯಕರು ಆಗಾಗ ಕರ್ನಾಟಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ಇದೇ ತಿಂಗಳು ಅಂದರೆ ಫೆಬ್ರವರಿ 11ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಅಮಿತ್ ಶಾ ಭೇಟಿ ನೀಡಲಿದ್ದಾರೆ.
ಫೆ.11 ರಂದು ಕರಾವಳಿಯಲ್ಲಿ ಕೆಲವು ಸರ್ಕಾರಿ ಕಾರ್ಯಕ್ರಮ ಹಾಗೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಸಲುವಾಗಿ ಅಮಿತ್ ಶಾ ಬರುತ್ತಿದ್ದಾರೆ.

ಅಮಿತ್ ಶಾ ಭೇಟಿ ಹಿನ್ನೆಲೆ ಮಂಗಳೂರಿನಲ್ಲಿ ಒಂದು ಕಡೆ ರೋಡ್ ಶೋ ನಡೆಸಲು ನಿರ್ಧರಿಸಲಾಗಿತ್ತು. ಕಾವೂರಿನಿಂದ ಪದವಿನಂಗಡಿ ಮೇರಿಹಿಲ್ ವರೆಗೆ ಸುಮಾರು ಎರಡೂವರೆ ಕಿಮೀ ಉದ್ದಕ್ಕೆ ರೋಡ್ ಶೋ ನಲ್ಲಿ ಅಮಿತ್ ಶಾ ಭಾಗವಹಿಸುವುದು ಎಂದು ಹೇಳಲಾಗಿದೆ. ರೋಡ್ ಶೋ ದಾರಿಯಲ್ಲಿ ಬೋಂದೆಲ್ ನಿಂದ ಪದವಿನಂಗಡಿ ನಡುವೆ ಬರುವ ಕೊರಗಜ್ಜನ ಗುಡಿಯಲ್ಲಿ ಫೆ.11 ರಂದು ಕೋಲ ನಡೆಯುವ ವಿಷಯ ಗೊತ್ತಾಗಿದೆ. ಅಂದು ರೋಡ್ ಶೋ ನಡೆಸಿದರೆ ಕೋಲಕ್ಕೆ ಹಾಗೂ ಅಲ್ಲಿನ ಜನರಿಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಬಿಜೆಪಿ ನಾಯಕರು ಅಮಿತ್ ಶಾಗೆ ವಿಷಯ ತಿಳಿಸಿದ್ದಾರೆ.
ಕೊರಗಜ್ಜನ ಕೋಲಕ್ಕೆ ತೊಂದರೆಯಾಗುವುದಾದರೆ ರೋಡ್ ಶೋ ವನ್ನೇ ರದ್ದು ಮಾಡಿ ಎಂದು ಅಮಿತ್ ಶಾ ಬಿಜೆಪಿ ನಾಯಕರಿಗೆ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಆಯೋಜನೆಗೊಂಡ ರೋಡ್ ಶೋ ರದ್ದು ಮಾಡಲಾಗಿದ್ದು, ಬೇರೊಂದು ಕಡೆ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ.
ಇನ್ನೂ, ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಮೈದಾನದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಸಲುವಾಗಿ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ.

