ಬೆಂಗಳೂರು: ಬಿಗ್ ಬಾಸ್ ಕನ್ನಡ 10ನೇ ಆವೃತ್ತಿಯ ನಾಲ್ಕನೇ ರನ್ನರ್ ಅಪ್ ವರ್ತೂರ್ ಸಂತೋಷ್ ಗೆ ಸನ್ಮಾನ ಮಾಡಿದ್ದ ಎಸ್ಐ ರನ್ನು ವರ್ಗಾವಣೆ ಮಾಡಿ ಅದೇಶಿಸಲಾಗಿದೆ.
ತಿಮ್ಮರಾಯಪ್ಪ, ವರ್ತೂರು ಸಂತೋಷ್‌ಗೆ ಪೇಟ, ಶಾಲು ತೊಡಿಸಿ ಸನ್ಮಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ತಿಮ್ಮರಾಯಪ್ಪನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಸಮವಸ್ತ್ರದಲ್ಲಿ ಸಂತೋಷ್‌ರನ್ನು ಸನ್ಮಾನಿಸಿದ್ದಕ್ಕೆ ಪಿಎಸ್‌ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಪೊಲೀಸ್ ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪ್ರಕರಣ ಸಂಬಂಧ ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ವರ್ತೂರು ಸಂತೋಷ್ ರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿತ್ತು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಸಂತೋಷ್ ಬಿಗ್ ಬಾಸ್ ಮನೆಗೆ ಹೋಗಿದ್ದರು. ಈಗ ಪೊಲೀಸ್ ಅಧಿಕಾರಿ ವರ್ತೂರು ಸಂತೋಷ್‌ರನ್ನು ಸನ್ಮಾನಿಸಿರುವುದು ಆಕ್ರೋಶಕ್ಕೆಡೆ ಮಾಡಿತ್ತು. ಹೀಗಾಗಿಯೇ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.