ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಕಣ್ಣನ್ನು ಕೆತ್ತಲು ಬಳಸಿದ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಅರುಣ್ ಯೋಗಿರಾಜ್ ಇಂದು ಬಹಿರಂಗ ಪಡಿಸಿದ್ದಾರೆ.
ಅರುಣ್ ಯೋಗಿರಾಜ್ ಅವರು ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
“ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿಯನ್ನು ಹಂಚಿಕೊಳ್ಳಲು ನಾನು ಯೋಚಿಸಿದೆ. ಇದರಲ್ಲಿ ನಾನು ರಾಮ ಲಲ್ಲಾನ ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ್ದೇನೆ” ಎಂದು ಬರೆದಿದ್ದಾರೆ. ಜೊತೆಗೆ ಫೋಟೋ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ, ರಾಮಲಲ್ಲಾನ ಕಣ್ಣುಗಳ ಕೆತ್ತನೆ ಬಗ್ಗೆ ಒಂದಷ್ಟು ಮಾಹಿತಿಯನ್ನು ಅರುಣ್ ಯೋಗಿರಾಜ್ ಅವರು ಹಂಚಿಕೊಂಡಿದ್ದರು. ಈ ವೇಳೆ ಅವರು ಕಣ್ಣುಗಳ ಕೆತ್ತನೆಗೆ ಬೆಳ್ಳಿಯ ಸುತ್ತಿಗೆ ಹಾಗೂ ಚಿನ್ನದ ಉಳಿ ಉಪಯೋಗಿಸಿದ್ದಾಗಿ ಹೇಳಿಕೊಂಡಿದ್ದರು.
ವಿಗ್ರಹದ ಮುಖ ಕೆತ್ತನೆಗೆ ಅರುಣ್ ಯೋಗಿರಾಜ್ ಅವರು ಎರಡು ತಿಂಗಳು ಯೋಚನೆ ಮಾಡಿದ್ದರಂತೆ. ಮಗುವಿನ ನಗುಮುಖದ ಆಲೋಚನೆ ಬರುತ್ತಿದ್ದಂತೆ ರಾಮಲಲ್ಲಾನ ಮುಖದ ಕೆತ್ತನೆ ಆರಂಭಿಸಿದ್ದೆ ಎಂದು ಹೇಳಿದ್ದರು, ಕಣ್ಣುಗಳ ಕೆತ್ತನೆಯನ್ನು ಶುಭಮುಹೂರ್ತ ನೋಡಿ ಕೆತ್ತಲಾಗುತ್ತದೆ. ರಾಮಲಲ್ಲಾನ ಕಣ್ಣುಗಳ ಕೆತ್ತನೆಗೆ 20 ನಿಮಿಷಗಳ ಶುಭಮುಹೂರ್ತ ನೀಡಲಾಗಿತ್ತು. ಕೆತ್ತನೆಯನ್ನು ಬೆಳ್ಳಿ ಸುತ್ತಿಗೆ ಹಾಗೂ ಚಿನ್ನದ ಉಳಿಯಲ್ಲಿ ಮಾತ್ರ ಕೆತ್ತನೆ ಮಾಡಬೇಕು. ಹೀಗಾಗಿ ಬೆಳ್ಳಿ ಸುತ್ತಿಗೆ ಹಾಗೂ ಚಿನ್ನದ ಉಳಿ ನನಗೆ ಪೂರೈಸಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದರು.
ಅಲ್ಲದೆ, ರಾಮಲಲ್ಲಾನ ಕಣ್ಣುಗಳ ಕೆತ್ತನೆಗೂ ಮುನ್ನ ಅರುಣ್ ಯೋಗಿರಾಜ್ ಅವರು ಸರಯು ನದಿಯಲ್ಲಿ ಸ್ನಾನ ಮಾಡಿದ್ದರು. ಹನುಮಾನ್ ಗರ್ಹಿ ಮತ್ತು ಕನಕ ಭವನದಲ್ಲಿ ಪೂಜೆ ಸಲ್ಲಿಸಿದ್ದರು.