ಭೋಪಾಲ್ : ನಮಗೆ ಮತ್ತು ನಮ್ಮ ಪಕ್ಷಕ್ಕೆ ಬುಡಕಟ್ಟು ಸಮುದಾಯ ಮತಬ್ಯಾಂಕ್ ಅಲ್ಲ, ಅದು ದೇಶದ ಹೆಮ್ಮೆ. ಕೇಸರಿ ಪಕ್ಷವು 370 ಸ್ಥಾನಗಳ ಗಡಿಯನ್ನು ಮುಟ್ಟಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾನುವಾರ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ 7,550 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಮಧ್ಯಪ್ರದೇಶಕ್ಕೆ ಚುನಾವಣಾ ಪ್ರಚಾರಕ್ಕಾಗಿ ಬಂದಿಲ್ಲ. ಆದರೆ ಜನರ ಸೇವೆಗಾಗಿ ಬಂದಿದ್ದೇನೆ. ನನ್ನ ಈ ರಾಜ್ಯ ಭೇಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ ಮತ್ತು ವಿವಿಧ ವಿಷಯಗಳನ್ನು ಹೇಳಲಾಗುತ್ತಿದೆ. ಕೆಲವರು ಮೋದಿ ಲೋಕಸಭೆ ಚುನಾವಣೆಯ ಹೋರಾಟವನ್ನು ಜಬುವಾದಿಂದ ಪ್ರಾರಂಭಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ನಾನು ಚುನಾವಣಾ ಪ್ರಚಾರಕ್ಕಾಗಿ ಬಂದಿಲ್ಲ. ಬದಲಾಗಿ ಜನರ ಸೇವೆ ಮಾಡಲು ಬಂದಿದ್ದೇನೆ ಎಂದರು.
ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ :
ಈ ಸಂದರ್ಭ ಪ್ರಧಾನಿ ಮೋದಿಯವರು ಆಹಾರ ಅನುದಾನ ಯೋಜನೆಯ ಸುಮಾರು ಎರಡು ಲಕ್ಷ ಮಹಿಳಾ ಫಲಾನುಭವಿಗಳಿಗೆ ಮಾಸಿಕ ಕಂತುಗಳನ್ನು ವಿತರಿಸಿದರು. ಇದರ ಅಡಿಯಲ್ಲಿ ವಿಶೇಷವಾಗಿ ಹಿಂದುಳಿದ ಬುಡಕಟ್ಟುಗಳ ಮಹಿಳೆಯರಿಗೆ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ 1,500 ರೂ. ನೀಡಲಾಗುತ್ತದೆ. ಪ್ರಧಾನಿ ಮೋದಿ ಅವರು 1.75 ಲಕ್ಷ ‘ಅಧಿಕಾರ್ ಅಭಿಲೇಖ್’ ಅಥವಾ ಸ್ವಾಮಿತ್ವ ಯೋಜನೆಯಡಿ ಭೂಮಿಯ ಹಕ್ಕುಗಳ ದಾಖಲೆಗಳನ್ನು ವಿತರಿಸಿದರು. ಧಾರ್ ಮತ್ತು ರತ್ಲಂನ ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಸಹಾಯ ಮಾಡುವ ಕುಡಿಯುವ ನೀರು ಸರಬರಾಜು ಯೋಜನೆಯಾದ ‘ತಲವಾಡ ಯೋಜನೆ’ ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಮತ್ತು ನಗರ ಪರಿವರ್ತನೆ (ಅಮೃತ್) 2.0 ಅಡಿಯಲ್ಲಿ 14 ನಗರ ನೀರು ಸರಬರಾಜು ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ಮಾಡಿದರು.ಝಬುವಾದ 50 ಗ್ರಾಮ ಪಂಚಾಯತ್‌ಗಳಿಗೆ ಪ್ರಧಾನ ಮಂತ್ರಿ ‘ನಲ್ ಜಲ್ ಯೋಜನೆ’ಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 559 ಗ್ರಾಮಗಳಿಗೆ ಅಂಗನವಾಡಿ ಭವನಗಳು, ನ್ಯಾಯಬೆಲೆ ಅಂಗಡಿಗಳು, ಆರೋಗ್ಯ ಕೇಂದ್ರಗಳು, ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳು, ಆಂತರಿಕ ರಸ್ತೆಗಳು ಸೇರಿದಂತೆ ಇತರೆ ನಿರ್ಮಾಣ ಚಟುವಟಿಕೆಗಳಿಗೆ ಬಳಸಲು 55.9 ಕೋಟಿ ರೂ. ನೀಡಿದ್ದಾರೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ರತ್ಲಂ ರೈಲು ನಿಲ್ದಾಣ ಮತ್ತು ಮೇಘನಗರ ರೈಲು ನಿಲ್ದಾಣದ ಪುನರಾಭಿವೃದ್ಧಿಯನ್ನು ಒಳಗೊಂಡಿರುವ ಬಹು ರೈಲು ಯೋಜನೆಗಳನ್ನು ಪ್ರಧಾನಿ ಅನಾವರಣಗೊಳಿಸಿದ್ದಾರೆ.