ಭಾರತ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸಾರಿಗೆ ಖಾತೆಯ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಯುವರಾಜ್ ಸಿಂಗ್ ಕುಟುಂಬದವರನ್ನು ಭೇಟಿಯಾಗಿದ್ದರು. ಈ ಭೇಟಿಯ ಬೆನ್ನಲ್ಲೇ ಯುವಿ ಬಿಜೆಪಿ ಪರ ಕಣಕ್ಕಿಳಿಯಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ.
ಪಂಜಾಬ್‌ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಯುವರಾಜ್ ಸಿಂಗ್ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದ್ದು, ಇದೇ ಕಾರಣದಿಂದಾಗಿ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗುರುರಾಸ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬಾಲಿವುಡ್ ನಟ ಸನ್ನಿ ಡಿಯೋಲ್ ಜಯ ಸಾಧಿಸಿದ್ದರು. ಇದೀಗ ಹಾಲಿ ಸಂಸದರ ಸ್ಥಾನಕ್ಕೆ ಯುವರಾಜ್ ಸಿಂಗ್ ಅವರನ್ನು ಕರೆತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕ್ರಿಕೆಟ್ ಆಟಗಾರರು ರಾಜಕೀಯ ಕಣಕ್ಕಿಳಿಯುವುದು ಹೊಸತೇನಲ್ಲ. ಈಗಾಗಲೇ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದರೆ, ಹರ್ಭಜನ್ ಸಿಂಗ್ ಎಎಪಿ ಪಕ್ಷದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಇನ್ನು ಮೊಹಮ್ಮದ್ ಅಝರುದ್ದೀನ್ ಮತ್ತು ಕೀರ್ತಿ ಆಜಾದ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇದೀಗ ಯುವರಾಜ್ ಸಿಂಗ್ ಹೆಸರು ಕೇಳಿ ಬರುತ್ತಿದೆ.