ಕಾಪು : ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಸ್ಕೂಟರ್ಗೆ ತಲೆ ಇಟ್ಟು ಮಲಗಿ ನಿದ್ರಿಸಿದ್ದ ಯುವಕನಿಗೆ ತಿಳಿಯದಂತೆ ಸ್ಕೂಟರ್ ಸಹಿತ ಸೊತ್ತುಗಳನ್ನು ಕಳ್ಳರು ಕದ್ದೊಯ್ದ ಅಪರೂಪದ ಘಟನೆಯೊಂದು ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ.
ಕಾರ್ಕಳ ಮುಡಾರು ಗ್ರಾಮದ ಚೇತನ್ ಫೆ. 11ರಂದು ಮಧ್ಯರಾತ್ರಿ 12 ಗಂಟೆಯ ವೇಳೆಗೆ ರಾ.ಹೆ. 66ರ ಮೂಲಕವಾಗಿ ಸುರತ್ಕಲ್ಗೆ ಹೋಗುತ್ತಿದ್ದಾಗ ಕೊಪ್ಪಲಂಗಡಿ ಬಳಿ ನಿದ್ದೆ ಬಂದು ಸ್ಕೂಟರ್ ಸವಾರಿ ಮಾಡಲು ಕಷ್ಟವಾಗಿದೆ. ಹೀಗಾಗಿ ಅಲ್ಲೇ ಇದ್ದ ದರ್ಗಾದ ಬದಿಯಲ್ಲಿ ಸ್ಕೂಟರನ್ನು ನಿಲ್ಲಿಸಿ ಮಲಗಿದ್ದರು.
2.30ರ ವೇಳೆಗೆ ಎಚ್ಚರವಾದಾಗ ಚೇತನ್ ಹೆಲ್ಮೆಟ್ ಸಮೇತ ರಸ್ತೆ ಬದಿ ಮಲಗಿದ್ದು, ಅವರ ಸ್ಕೂಟರ್ ಹಾಗೂ ಸೊತ್ತುಗಳು ಕಳವಾಗಿರುವುದು ಗಮನಕ್ಕೆ ಬಂದಿದೆ.
ಖದೀಮರು ಸ್ಕೂಟರ್ ಸಹಿತ ಮೊಬೈಲ್, ಪರ್ಸ್, ಪರ್ಸ್ನಲ್ಲಿದ್ದ ವೋಟರ್ ಐಡಿ, ಡಿಎಲ್, ಸ್ಕೂಟರ್ನ ದಾಖಲೆ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಹಾಗೂ ಡಿಕ್ಕಿಯಲ್ಲಿದ್ದ ಟೂಲ್ಸ್ ಕಳವು ಮಾಡಿಕೊಂಡು ಹೋಗಿದ್ದಾರೆ.
ಕೆಎ 20 ಇಡಬ್ಲ್ಯು 3016 ನೇ ಟಿವಿಎಸ್ ಸ್ಕೂಟರ್ನ ಮೌಲ್ಯ 30,000 ರೂ. ಆಗಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.