ಶಿವಮೊಗ್ಗ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸುವ ಮೂಲಕ ಹಲವು ಕಂಪೆನಿಗಳು, ಸರ್ಕಾರ ಉದ್ಯೋಗವಕಾಶ ನೀಡುತ್ತದೆ. ವಿದ್ಯಾರ್ಹತೆ ಮೇಲೆ ಅರ್ಜಿ ಆಹ್ವಾನಿಸುವುದು ಸಾಮಾನ್ಯ. ಆದರೆ, ಶಿವಮೊಗ್ಗ ವಿಮಾನ ನಿಲ್ದಾಣ ಪ್ರಾಣಿ, ಪಕ್ಷಿ ಓಡಿಸುವ ಹುದ್ದೆ ಸೃಷ್ಟಿಸಿದೆ. ಅಲ್ಲದೇ ಅದಕ್ಕೆ ಆಕರ್ಷಕ ಸಂಬಳವನ್ನೂ ನಿಗದಿ ಮಾಡಿ ಆಸಕ್ತ ಸಂಸ್ಥೆಗಳಿಂದ ಟೆಂಡರ್ ಕರೆದಿದೆ ಅಂದ್ರೆ ನೀವು ನಂಬಲೇಬೇಕು.
ಪ್ರತಿ ವಿಮಾನ ನಿಲ್ದಾಣದಲ್ಲೂ ರನ್‌ವೇ, ಟರ್ಮಿನಲ್ ಬಳಿ ಪ್ರಾಣಿ, ಪಕ್ಷಿಗಳು ಸುಳಿಯದಂತೆ, ಬಂದರೂ ಅವುಗಳನ್ನು ಓಡಿಸುವುದು ಅವಶ್ಯಕ.
ವಿಮಾನ ಇಳಿಯುವ ಸಂದರ್ಭದಲ್ಲಿ ರನ್ ವೇ ಮೇಲೆ ಪ್ರಾಣಿ, ಪಕ್ಷಿ ಬಂದರೆ ಅಪಘಾತಗಳು ನಡೆಯುವ ಸಾಧ್ಯತೆ ಹೆಚ್ಚಿರ ತ್ತದೆ. ಇನ್ನು ಟರ್ಮಿನಲ್‌ನಲ್ಲಿ ಪಕ್ಷಿಗಳ ಹಿಕ್ಕೆ ಬಿದ್ದರೆ ವಿಮಾನ ನಿಲ್ದಾಣದ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಪ್ರಾಣಿ, ಪಕ್ಷಿಗಳನ್ನು ಓಡಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ 13 ಮಂದಿಯನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತಿದ್ದು, ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕಕ್ಕೆ ಟೆಂಡರ್ ಕರೆಯಲಾಗಿದೆ. ಈ ಹುದ್ದೆ ಹೊಸದು ಎನಿಸಿದರೂ ಇದಕ್ಕೆಂದೇ ಪರಿಣತ ಸಂಸ್ಥೆಗಳು, ಸಿಬ್ಬಂದಿ ಇರುತ್ತಾರೆ.