ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೌಟುಂಬಿಕ ತುರ್ತು ಪರಿಸ್ಥಿತಿ ಹಿನ್ನೆಲೆ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ರಾಜ್ ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ 2ನೇ ದಿನದಾಟದಲ್ಲಿ ಕಾಣಿಸಿಕೊಂಡಿದ್ದ ಅಶ್ವಿನ್ ದಿಢೀರ್ ಮನೆಗೆ ವಾಪಾಸ್ಸಾಗಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದ ಉಳಿದ ದಿನದಾಟಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ರವಿಚಂದ್ರನ್ ಅಶ್ವಿನ್ ಅವರು ಕೌಟುಂಬಿಕ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣ ಭಾರತ ಟೆಸ್ಟ್ ತಂಡದಿಂದ ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಸವಾಲುದಾಯಕ ಸಮಯವಾಗಿದೆ. ಹಾಗಾಗಿ ಇಂಥ ಕಠಿಣ ಸಮಯದಲ್ಲಿ ಬಿಸಿಸಿಐ ಹಾಗೂ ಭಾರತ ತಂಡ ಆರ್ ಅಶ್ವಿನ್‌ಗೆ ಬೆಂಬಲ ನೀಡಲಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆರ್ ಅಶ್ವಿನ್ ಬ್ಯಾಟಿಂಗ್‌ನಲ್ಲಿ 37 ರನ್‌ಗಳ ಕೊಡುಗೆ ನೀಡಿದ್ದರೆ, ಬೌಲಿಂಗ್‌ನಲ್ಲಿ ಒಂದು ವಿಕೆಟ್ ಪಡೆದುಕೊಂಡಿದ್ದರು. ಆ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 500 ವಿಕೆಟ್‌ಗಳ ಸಾಧನೆ ಮಾಡಿದ್ದರು. ಆದರೆ, ಈ ಸಂಭ್ರಮದಲ್ಲಿ ತೇಲಾಡುತ್ತಿದ್ದ ಆರ್ ಅಶ್ವಿನ್‌ಗೆ ಕೌಟುಂಬಿಕ ತುರ್ತು ಪರಿಸ್ಥಿತಿ ಕರೆ ಬರ ಸಿಡಲು ಬಡಿದಂತಾಗಿದೆ.