ರಾಂಚಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ಮೊದಲ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 302 ರನ್ ಕಲೆಹಾಕಿದೆ.
ತಂಡದ ಪರ ಮಾಜಿ ನಾಯಕ ಜೋ ರೂಟ್ ಅಜೇಯ ಶತಕ ಸಿಡಿಸಿದರೆ, ಬೆನ್ ಫೋಕ್ಸ್ 47 ರನ್ ಹಾಗೂ ಆರಂಭಿಕ ಜ್ಯಾಕ್ ಕ್ರೌಲಿ 42 ರನ್ಗಳ ಕೊಡುಗೆ ನೀಡಿದರು. ಇನ್ನು ರೂಟ್ ಜೊತೆ ಅಜೇಯರಾಗಿ ಉಳಿದಿರುವ ಓಲಿ ರಾಬಿನ್ಸನ್ 31 ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾ ಪರ ಮಿಂಚಿದ ಆಕಾಶ್ ದೀಪ್ ಮೊದಲ ಪಂದ್ಯದಲ್ಲೇ 3 ವಿಕೆಟ್ ಕಬಳಿಸಿದರೆ, ಅನುಭವಿ ಬೇಗಿ ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.
31ನೇ ಶತಕ ಸಿಡಿಸಿದ ರೂಟ್
ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿತ್ತು. ಇದಾದ ಬಳಿಕ ಎರಡನೇ ಸೆಷನ್‌ನಲ್ಲಿ ಅಂದರೆ ಟೀ ಸಮಯದವರೆಗೆ ಜೋ ರೂಟ್ ಮತ್ತು ಬೆನ್ ಫಾಕ್ಸ್ ಯಾವುದೇ ವಿಕೆಟ್ ಬೀಳಲು ಅವಕಾಶ ನೀಡಲಿಲ್ಲ. ಆ ಅವಧಿಯಲ್ಲಿ ಅವರಿಬ್ಬರು 86 ರನ್ ಸೇರಿಸಿದರು. ಮೂರನೇ ಸೆಷನ್ ಅಂದರೆ ಟೀ ಟೈಮ್ ನಂತರ ಸಿರಾಜ್ ಟೀಮ್ ಇಂಡಿಯಾಗೆ ಪುನರಾಗಮನ ಮಾಡಿದರು. ಅವರು ರೂಟ್ ಮತ್ತು ಫಾಕ್ಸ್ ಅವರ 113 ರನ್ ಜೊತೆಯಾಟವನ್ನು ಮುರಿದರು. ಫಾಕ್ಸ್ ಅರ್ಧಶತಕವನ್ನು ತಪ್ಪಿಸಿಕೊಂಡರು. 47 ರನ್ ಗಳಿಸಿದ್ದಾಗ ಸಿರಾಜ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಅದೇ ಸಮಯದಲ್ಲಿ ಟಾಮ್ ಹಾರ್ಟ್ಲಿ 13 ರನ್ ಗಳಿಸಿ ಸಿರಾಜ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ರೂಟ್ ತಮ್ಮ ಟೆಸ್ಟ್ ವೃತ್ತಿಜೀವನದ 31ನೇ ಶತಕವನ್ನು ಗಳಿಸಿದರು. ಅವರು ಓಲಿ ರಾಬಿನ್ಸನ್ ಅವರೊಂದಿಗೆ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.