ಹೊಸದಿಲ್ಲಿ: ಬ್ರಿಟಿಷರ ವಸಾಹತು ಕಾಲದ ಕಾನೂನುಗಳನ್ನು ಬದಲಿಸಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ಭಾರತೀಯ ನ್ಯಾಯ (ದ್ವಿತೀಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ದ್ವಿತೀಯ) ಅಧಿನಿಯಮ ಮಸೂದೆಗಳು, ಪ್ರಸ್ತುತ ಬಳಕೆಯಲ್ಲಿ ಇರುವ ಭಾರತೀಯ ದಂಡ ಸಂಹಿತೆ 1860, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 1973 ಮತ್ತು ಭಾರತೀಯ ಪುರಾವೆ ಕಾಯ್ದೆ, 1982ಗಳ ಜಾಗದಲ್ಲಿ ಜಾರಿಯಾಗಲಿವೆ.
ಈ ಮೂರು ಹೊಸ ಕಾನೂನುಗಳನ್ನು ಸಂಸತ್‌ನ ಕೆಳಮನೆ ಹಾಗೂ ಮೇಲ್ಮನೆ ಎರಡೂ ಸದನಗಳಲ್ಲಿ ಅಂಗೀಕರಿಸಲಾಗಿತ್ತು. ಅಲ್ಲದೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಡಿಸೆಂಬರ್‌ನಲ್ಲಿ ಇವುಗಳಿಗೆ ಅನುಮೋದನೆ ನೀಡಿದ್ದರು.
ಹೊಸ ಶಾಸನಗಳು ಭಾರತೀಯತೆಯನ್ನು, ಭಾರತದ ಸಂವಿಧಾನವನ್ನು ಮತ್ತು ಜನರ ಯೋಗ ಕ್ಷೇಮವನ್ನು ಬಯಸುತ್ತದೆ ಎಂದು ಕಳೆದ ವರ್ಷ ಸಂಸತ್‌ನಲ್ಲಿ ಮೂರು ಮಸೂದೆಗಳನ್ನು ಸಂಸತ್‌ನಲ್ಲಿ ಮಂಡಿಸುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಈ ಮೂರು ಕಾನೂನುಗಳ ಅಡಿಯಲ್ಲಿ ಎಲ್ಲಾ ವ್ಯವಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಒಳಪಟ್ಟ ಬಳಿಕ ಮುಂದಿನ ಐದು ವರ್ಷಗಳಲ್ಲಿ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯು ಜಗತ್ತಿನಲ್ಲಿಯೇ ಅತ್ಯಂತ ಆಧುನಿಕ ಎನಿಸಲಿದೆ ಎಂದು ತಿಳಿಸಿದ್ದರು.