ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ’ ಕುರಿತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂಗಳು ಜಾಗೃತರಾಗಿರಬೇಕು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ‘ಜಾಗೃತರಾಗಿ ಹಿಂದೂಗಳೇ, ದೇವರ ಹುಂಡಿಗೆ ಕನ್ನ ಹಾಕುತ್ತಿದ್ದಾರೆ ಕನ್ನರಾಮಯ್ಯನವರು. ಹಿಂದೂಗಳು ದೇವಸ್ಥಾನದ ಹುಂಡಿಗೆ ಹಾಕುವ ದಾನವನ್ನು ಸಿದ್ದರಾಮಯ್ಯರ ಹುಂಡಿಗೆ ವರ್ಗಾಯಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.
ತಿಲಕ ಕಂಡರೆ ಭಯಪಡುವ ಸಿದ್ದರಾಮಯ್ಯ ಅವರಿಗೆ ಹುಂಡಿಗೆ ಕನ್ನ ಹಾಕುವಾಗ ಭಯ ಆಗುವುದಿಲ್ಲವೇ’ ಎಂದು ಬಿಜೆಪಿ ಪ್ರಶ್ನಿಸಿದೆ.
‘ಸರ್ಕಾರದ ಖಜಾನೆಯನ್ನು ಬೇಕಾಬಿಟ್ಟಿ ಬರಿದು ಮಾಡಿ ದೇವಸ್ಥಾನಗಳ ಹುಂಡಿಗೆ ಕೈ ಹಾಕಲು ಕಾಂಗ್ರೆಸ್ ಸರ್ಕಾರ ಧರ್ಮಾದಾಯ ವಿಧೇಯಕ ಮಸೂದೆಯನ್ನು ಅಂಗೀಕರಿಸಲು ಮಾಡಿದ ಪ್ರಯತ್ನ ಬಿಜೆಪಿಯ ಸೈದ್ಧಾಂತಿಕ ಬಲದಿಂದ ವಿಫಲವಾಗಿದೆ. ಭಾರತೀಯ ಧರ್ಮವನ್ನು ದುರುಪಯೋಗಪಡಿಸಿ ದೇವಸ್ಥಾನಗಳ ಹಣ ಹೊಡೆಯುವ ಹುನ್ನಾರ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಸೋಲಿನ ಪಾಠದ ರುಚಿ ಸಿಕ್ಕಿದೆ’ ಎಂದು ಬಿಜೆಪಿ ಕಿಡಿಕಾರಿದೆ.
‘ಶ್ರೀರಾಮನ ಅಸ್ತಿತ್ವ ಪ್ರಶ್ನಿಸುವ ಮನಸ್ಥಿತಿ ಇಟ್ಟುಕೊಂಡು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನೇ ವಿರೋಧಿಸಿ, ಹಿಂದೂ ಧರ್ಮವೇ ಒಂದು ವ್ಯಾಧಿ ಎನ್ನುವವರ ಜತೆ ಕೈಜೋಡಿಸಿ ಭಾರತೀಯ ಸಂಸ್ಕೃತಿಯ ಸರ್ವನಾಶಕ್ಕೆ ಕೈ ಹಾಕುವ ಸಿದ್ದರಾಮಯ್ಯನವರ ಮುಂದಿನ ಸರ್ವಪ್ರಯತ್ನಗಳೂ ವಿಫಲವಾಗುವುದು ಖಚಿತ ಮತ್ತು ನಿಶ್ಚಿತ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ’ಗೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಸೋಲುಂಟಾಗಿದೆ. ಆ ಮೂಲಕ, ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರಕ್ಕೆ ಮುಖಭಂಗ ಉಂಟಾಗಿದೆ.
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ₹1 ಕೋಟಿಗೂ ಹೆಚ್ಚು ವರಮಾನ ಹೊಂದಿರುವ ದೇವಸ್ಥಾನಗಳ ಹುಂಡಿಯಿಂದ ವರ್ಷಕ್ಕೆ ಶೇ.10ರಷ್ಟು ಮತ್ತು ₹10 ಲಕ್ಷದಿಂದ ₹1 ಕೋಟಿವರೆಗಿನ ವರಮಾನ ಹೊಂದಿರುವ ದೇವಸ್ಥಾನಗಳಿಂದ ಶೇ.5ರಷ್ಟನ್ನು ‘ಸಾಮಾನ್ಯ ಸಂಗ್ರಹಣಾ ನಿಧಿ’ಗೆ ಸಂದಾಯ ಮಾಡುವುದು. ಮತ್ತು ಹೀಗೆ ಸಂಗ್ರಹವಾಗುವ ನಿಧಿಯನ್ನು ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ.